ಎರಡನೇ ದಿನವೂ ಎಂ. ಎಸ್. ಧೋನಿ ಭರ್ಜರಿ ಆಟ

ಮುಂಬೈ, ಅ. 1 : ಎಂ. ಎಸ್. ಧೋನಿ - ದಿ ಅನ್ ಟೋಲ್ಡ್ ಸ್ಟೋರಿ ಮೊದಲ ದಿನದ ಭರ್ಜರಿ ಪ್ರದರ್ಶನದ ಬಳಿಕ ಎರಡನೇ ದಿನವೂ ತನ್ನ ಅಜೇಯ ಆಟವನ್ನು ಮುಂದುವರಿಸಿದೆ. ಧೋನಿಯಾಗಿ ಸುಶಾಂತ್ ಸಿಂಗ್ ರಜಪೂತ್ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮೊದಲ ದಿನ 21.30 ಕೋಟಿ ಸಂಪಾದನೆಯ ಮೂಲಕ ಮೊದಲ ದಿನವೇ ಅತ್ಯಂತ ಹೆಚ್ಚು ಗಳಿಕೆ ಮಾಡಿದ 2016 ರ ಎರಡನೇ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶನಿವಾರ ಹಾಗು ರವಿವಾರ ಈ ಗಳಿಕೆಯಲ್ಲಿ ಗಮನಾರ್ಹ ಹೆಚ್ಚಳ ಆಗುವ ನಿರೀಕ್ಷೆಯಿದೆ.
ಸುಶಾಂತ್ ಅವರ ನಟನೆಗೆ ಧೋನಿ ಕೂಡ ಫುಲ್ ಖುಷ್ ಆಗಿದ್ದಾರೆ. ಹಾವಭಾವ ಹಾಗು ಆಟದ ಶೈಲಿಯಲ್ಲಿ ನನ್ನನ್ನು ಸಂಪೂರ್ಣವಾಗಿ ಸುಶಾಂತ್ ಕಾಪಿ ಮಾಡಿದ್ದಾರೆ . ಇದಕ್ಕಾಗಿ ಅವರು ಬಹಳ ಶ್ರಮ ಹಾಕಿದ್ದಾರೆ. 9 ತಿಂಗಳು ಪ್ರತಿದಿನ ಎರಡೂವರೆ ಗಂಟೆ ತರಬೇತಿ ಬಳಿಕ ಈಗ ಅವರು ಯಾವುದಾದರೂ ಲೀಗ್ ನಲ್ಲಿ ಆಡುವಷ್ಟು ಕ್ರಿಕೆಟ್ ಕಲಿತಿದ್ದಾರೆ ಎಂದು ಧೋನಿ ಹೇಳಿದ್ದಾರೆ.
ಧೋನಿಯ ತವರು ರಾಜ್ಯ ಝಾರ್ಖಂಡ್ ಬಳಿಕ ಇದೀಗ ಉತ್ತರ ಪ್ರದೇಶದಲ್ಲೂ ಧೋನಿ ಚಿತ್ರಕ್ಕೆ ತೆರಿಗೆ ರಿಯಾಯಿತಿ ನೀಡಲಾಗಿದೆ.





