ಜಿಲ್ಲೆಯಲ್ಲಿ ಮರಳಿನ ಕೊರತೆ ಇಲ್ಲ: ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್

ಮಂಗಳೂರು,ಅ.1: ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮರಳಿನ ಕೊರತೆ ಇಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುರುತಿಸಲಾದ 19 ಮರಳಿನ ಬ್ಲಾಕ್‌ಗಳಲ್ಲಿ 425 ಗುತ್ತಿಗೆದಾರರಿಗೆ ಮರಳು ತೆಗೆಯಲು ಎಪ್ರಿಲ್ ತಿಂಗಳಲ್ಲಿ ಪರವಾನಿಗೆ ನೀಡಲಾಗಿದೆ. ಪ್ರಸಕ್ತ ನವೀಕರಣ ಮಾಡಿ ಅವರಿಗೆ ಮರಳು ತಗೆಯಲು ಅವಕಾಶ ನೀಡಲಾಗಿದೆ. ಹೊಸತಾಗಿ ಯಾರಿಗೂ ಮರಳು ತೆಗೆಯಲು ಪರವಾನಿಗೆ ನೀಡಲಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್ ತಿಳಿಸಿದರು.
ಕರಾವಳಿಯಲ್ಲಿ ಮಳೆಗಾಲದ ಎರಡು ತಿಂಗಳು ನಿಗದಿಪಡಿಸಿದ ಪ್ರದೇಶದಲ್ಲಿ ಮಾತ್ರ ಸಂಪೂರ್ಣ ನಿಷೇಧ ವಿಧಿಸಲಾಗಿತ್ತು. ಉಳಿದ ತಿಂಗಳಲ್ಲಿ ನಿಯಮಗಳನ್ನು ಪಾಲಿಸಿ ಮರಳು ತಗೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಇತ್ತೀಚೆಗೆ ಎಲ್ಲಾ ಗುತ್ತಿಗೆದಾರರಿಗೂ ಸುತ್ತೋಲೆ ಕಳುಹಿಸಿದ ಸಂದರ್ಭದಲ್ಲಿ ಗುತ್ತಿಗೆದಾರರು ನಿರ್ಬಂಧ ಸಡಿಲಿಸಲು ಮನವಿ ಮಾಡಿದ್ದರು. ಆದರೆ ಈ ನಿಯಮಾವಳಿಯನ್ನು ಪರವಾನಿಗೆ ನೀಡಿದ ಸಂದರ್ಭದಲ್ಲಿ ನೀಡಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ ಇಲ್ಲ ಎನ್ನುವುದನ್ನು ಅವರ ಗಮನಕ್ಕೆ ತರಲಾಗಿದೆ. ಆದರೂ ಅದನ್ನು ಪಾಲಿಸಲು ಕೆಲವರು ವಿಳಂಬ ಮಾಡಿದ ಕಾರಣ ಮರಳಿನ ಸಾಗಾಟ ಆಗದೆ ಸಮಸ್ಯೆ ಉಂಟಾಗಿರಬಹುದು. ಅಲ್ಲದೆ ಲೋಕೋಪಯೋಗಿ ಇಲಾಖೆಯ ಬಳಿ ಒಂದು ಲಕ್ಷ ಕ್ಯೂಬಿಕ್ ಮೀಟರ್ ಮರಳು ಸಂಗ್ರಹವಿದೆ. ಇದರಲ್ಲಿ ಶೇ. 25 ಮಾತ್ರ ಬಳಕೆಯಾಗಿದೆ. ಉಳಿದಂತೆ ಮರಳಿನ ಅಗತ್ಯವಿರುವವರು ಪಡೆದುಕೊಳ್ಳಬಹುದಿತ್ತು. ಈ ಮರಳಿಗೆ ಕನಿಷ್ಠ ದರವನ್ನು ನಿಗದಿ ಪಡಿಸಲಾಗಿತ್ತು.ಇದರಿಂದ ಮರಳಿನ ಕೊರತೆ ಇರುವ ಸಂದರ್ಭದಲ್ಲಿ ಸಂಗ್ರಹಿತ ಮರಳನ್ನು ಸಾರ್ವಜನಿಕರಿಗೆ ನೀಡಲು ಅವಕಾಶವಿತ್ತು ಎನ್ನುವ ಸೂಚನೆಯನ್ನು ಹಿಂದೆ ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಮರಳು ತೆಗೆಯುವವರು ಸಿಆರ್‌ಝಡ್ ನಿಯಮಾವಳಿಯನ್ನು ಉಲ್ಲಂಘಿಸಬಾರದು.
ಸೇತುವೆಯ ಎರಡೂ ಬದಿಯಲ್ಲಿ 250 ಮೀಟರ್ ಒಳಗೆ ಮರಳು ತಗೆಯುವುದು,ಲೋಡಿಂಗ್ ಅನ್‌ಲೋಡಿಂಗ್ ಸಂಗ್ರಹ ಯಾವುದನ್ನೂ ಮಾಡಬಾರದು.
ಮರಳು ತೆಗೆಯಲು ಗುರುತಿಸಿದ ಸ್ಥಳಗಳಲ್ಲಿ ಸಿಸಿಟಿ.ವಿ ಅಳವಡಿಸಿ ಜಿಲ್ಲಾ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಲ್ಪಿಸಲು ಸೂಚನೆ ನೀಡಲಾಗಿದೆ.
ಮರಳು ಬ್ಲಾಕ್‌ನಿಂದ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಗಳು ಮರಳುಗಾರಿಕೆಯಿಂದ ಹಾನಿಯಾದ ಸಂದರ್ಭದಲ್ಲಿ ಗುತ್ತಿಗೆದಾರರು ಸರಿಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ಹೊರ ರಾಜ್ಯಕ್ಕೆ ಮರಳು ಸಾಗಾಟಕ್ಕೆ ಅವಕಾಶ ನೀಡಲಾಗಿಲ್ಲ.ಒಂದು ತಿಂಗಳಲ್ಲಿ ಜಿಪಿಎಸ್ ಅಳವಡಿಕೆಗೆ ಸೂಚನೆ ನೀಡಲಾಗಿದೆ.
ಮರಳು ತಗೆಯಲು ಪರವಾನಿಗೆ ನೀಡಿದ 19 ಬ್ಲಾಕ್‌ಗಳಿಗೂ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಮಟ್ಟದ ಒಬ್ಬರು ಅಧಿಕಾರಿಯನ್ನು ನೇಮಿಸಲಾಗಿದೆ. ಈ ಬ್ಲಾಕ್‌ಗಳಲ್ಲಿ ನಿಗದಿ ಪಡಿಸಿದ ಪ್ರಮಾಣದ ಮರಳು ಮಾತ್ರ ತಗೆಯಲು ಅವಕಾಶವಿದೆ.
ಮರಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನಿಗದಿ ಪಡಿಸಿದ ದರದಲ್ಲಿ ಗ್ರಾಹಕರಿಗೆ ನೀಡಲು ಅವಕಾಶವಿದೆ
ಎನ್ನುವ ಸೂಚನೆಯನ್ನು ಗುತ್ತಿಗೆದಾರರಿಗೂ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.







