ಚಲೋ ಉಡುಪಿ: ಬೆಳ್ತಂಗಡಿಯಲ್ಲಿ ಸಮಾಲೋಚನಾ ಸಭೆ

ಬೆಳ್ತಂಗಡಿ, ಅ.1: ಚಲೋ ಉಡುಪಿ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಚಿಂತಕಿ ಅತ್ರಾಡಿ ಅಮೃತಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ರಾಜ್ಯದ ಎಲ್ಲ ಎಡಪಂಥೀಯ, ದಲಿತ, ಪ್ರಗತಿಪರ ಸಂಘಟನೆಗಳು ಒಟ್ಟಾಗಿ ರೂಪಿಸಿರುವ ದಲಿಯ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಸ್ವಾಭಿಮಾನಿ ಸಂಘರ್ಷ ಜಾಥಾ ಚಲೋಉಡುಪಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದು ರಾಜ್ಯದ ಶೋಷಿತ ಜನರ ಆಂದೋಲನವಾಗಿ ರೂಪಗೊಳ್ಳುತ್ತಿದೆ. ಆಹಾರ ಹಾಗೂ ಭೂಮಿಯ ಹಕ್ಕನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ಚಳವಳಿಯಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅತ್ರಾಡಿ ಅಮೃತಾ ಶೆಟ್ಟಿ ಮಾತನಾಡಿ, ಇದೊಂದು ಐತಿಹಾಸಿಕ ಹೋರಾಟವಾಗಿದೆ. ಆಹಾರದ ಹಕ್ಕನ್ನು ಯಾರಿಗೂ ಕಸಿದುಕೊಳ್ಳಲು ಅವಕಾಶವಿಲ್ಲ. ಅದಕ್ಕಾಗಿ ನಾವು ಯಾರ ಅನುಮತಿಗೂ ಕಾಯಬೇಕಾಗಿಲ್ಲ. ನಮ್ಮೊಳಗಿನ ಎಲ್ಲ ಭೇದಭಾವಗಳನ್ನೂ ಮರೆತು ಒಟ್ಟಾಗಿ ಮುಂದುವರಿಯಬೇಕಾಗಿದೆ ಎಂದರು. ಪತ್ರಕರ್ತ ಶಿಬಿ ಧರ್ಮಸ್ಥಳ ಮಾತನಾಡಿ, ದಲಿತರ, ಹಿಂದುಳಿದ ವರ್ಗದ ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ವಿರುದ್ದ ದ್ವನಿಯೆತ್ತಬೇಕಾದ ಅನಿವಾರ್ಯ ಸಂದರ್ಭ ಇದಾಗಿದ್ದು ಚಲೋ ಉಡುಪಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು.
ಸಭೆಯಲ್ಲಿ ಚಲೋ ಉಡುಪಿ ಕಾರ್ಯಕ್ರಮದ ಬಗ್ಗೆ ತಾಲೂಕಿನಲ್ಲಿ ವ್ಯಾಪಕ ಪ್ರಚಾರಾಂದೋಲನ ನಡೆಸಲು ಹಾಗೂ ವಿವಿಧ ಸಂಘಟನೆಗಳನ್ನು ಒಟ್ಟುಸೇರಿಸಿ ಮುಂದುವರಿಯಲು ನಿರ್ಧರಿಸಲಾಯಿತು.ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಲೂಕಿನಿಂದ ಸುಮಾರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಬಗ್ಗೆ ವಿವಿಧ ಸಂಘಟನೆಗಳವರು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ ಕುಕ್ಕೇಡಿ, ನಗರ ಪಂಚಾಯತ್ ಸದಸ್ಯ ಜನಾರ್ಧನ ಬಂಗೇರ ಮೂಡಾಯಿಗುತ್ತು, ಯುವ ಕಾಂಗ್ರೆಸ್ ತಾಲೂಕು ಕಾರ್ಯಾಧ್ಯಕ್ಷ ಅಭಿನಂದನ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಮುಖಂಡರುಗಳಾದ ನೇಮಿರಾಜ ಕಿಲ್ಲೂರು, ಜಯಾನಂದ ಕೊಯ್ಯೂರು, ಬಿ.ಕೆ ವಸಂತ, ನಾಗರಾಜ ಲಾಯಿಲ, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪಸ್ಥಾಪಿತ) ತಾಲೂಕು ಸಂಚಾಲಕ ರಮೇಶ್. ಆರ್, ಬಿವಿಎಸ್ ಸಂಚಾಲಕ ಲಕ್ಷ್ಮಣ್ ಜಿ.ಎಸ್, ಸಿಪಿಐಎಂ ಮುಖಂಡ ಬಿ.ಎಂ ಭಟ್, ಜಯರಾಮಮಯ, ಶೇಖರ ಲಾಯಿಲ, ಸಿಐಟಿಯು ಮುಖಂಡರಾದ ಲೋಕೇಶ್ ಕುದ್ಯಾಡಿ, ನಾರಾಯಣ, ದೇವಕಿ. ಲೇಖಕ ಶಾಫಿ ಬಂಗಾಡಿ, ಯುವ ಮುನ್ನಡೆಯ ಅಬ್ದುಲ್ ಖಲೀಫ್, ಉಪನ್ಯಾಸಕ ಕುಮಾರಸ್ವಾಮಿ ಬೆಳ್ಳಹಳ್ಳಿ, ಸಮುದಾಯದ ಪ್ರಶಾಂತ್, ಹೆಚ್ ಕೃಷ್ಣಯ್ಯ ಲಾಯಿಲ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.







