ಗಡಿಯಿಂದ ಗುಳೇ ಹೋಗುವವರನ್ನು ಕೇಳುವವರೇ ಇಲ್ಲ !

# ಸ್ಥಳಾಂತರಿಸಿ ಎಂದು ಘೋಷಿಸಿ ಕೈತೊಳೆದುಕೊಂಡ ಸರಕಾರ
# ದಾಳಿಗೆ ಸಂಭ್ರಮಿಸುತ್ತಿರುವವರಿಗೆ ಇದರ ಪರಿವೆಯೇ ಇಲ್ಲ
# ಮನೆ, ಬೆಳೆ ಬಿಟ್ಟು ಇದ್ದಕ್ಕಿದ್ದಂತೆ ಹೊರಟವರ ಸಂಕಟ
# ಜೀವ ಪಣಕ್ಕಿಟ್ಟು ನಿಲ್ಲುವ ಮನೆಯ ಯಜಮಾನ
ರೋರನ್‌ವಾಲಾ, ಸೆ.30: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನಾಪಡೆಯ ಸೀಮಿತ ದಾಳಿಯನ್ನು ಭಾರತಾದ್ಯಂತ ಸಹಸ್ರಾರು ಮಂದಿ ಸಂಭ್ರಮಿಸುತ್ತಿರಬಹುದು. ಆದರೆ ಗಡಿನಿಯಂತ್ರಣ ರೇಖೆಯ ಸಮೀಪದಲ್ಲಿರುವ ಜನರು, ಯುದ್ಧಭೀತಿಯ ಹಿನ್ನೆಲೆಯಲ್ಲಿ ತಮ್ಮನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಸರಕಾರದಿಂದ ನಿರೀಕ್ಷಿತ ನೆರವು ದೊರೆಯದಿರುವ ಬಗ್ಗೆ ತೀವ್ರ ಹತಾಶರಾಗಿದ್ದಾರೆ. ತಮ್ಮ ಮನೆ ಹಾಗೂ ಆಸ್ತಿಪಾಸ್ತಿಗಳ ಸುರಕ್ಷತೆಯ ಬಗ್ಗೆ ತಮಗೆ ಆತಂಕವಿದೆಯೆಂದು ಅವರು ಹೇಳಿದ್ದಾರೆ.

ಗಡಿಪ್ರದೇಶಗಳ ಗ್ರಾಮಸ್ಥರನ್ನು ತೆರವುಗೊಳಿಸಲಾಗುವುದೆಂದು ಸರಕಾರವು ಘೋಷಿಸಿ 24 ತಾಸುಗಳು ಕಳೆದರೂ, ಸರಕಾರವು ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಯಾವುದೇ ಸಾರಿಗೆ ವ್ಯವಸ್ಥೆಯ ಏರ್ಪಾಡು ಮಾಡಿಲ್ಲವೆಂದು, ಪಂಜಾಬ್‌ನ ಅಟ್ಟಾರಿ ವಲಯದ ಗ್ರಾಮಸ್ಥರು ಆರೋಪಿಸುತ್ತಾರೆ.
‘‘ಸರಕಾರದ ಯಾವುದೇ ಅಧಿಕಾರಿ ಗ್ರಾಮವನ್ನು ತಲುಪಿಲ್ಲ. ಗ್ರಾಮಸ್ಥರನ್ನು ತೆರವುಗೊಳಿಸುವ ಬಗ್ಗೆ ಪ್ರಕಟಿಸುತ್ತಿದ್ದಂತೆಯೇ ನಾನು ಪತ್ನಿ ಹಾಗೂ ನನ್ನ ಮಕ್ಕಳನ್ನು ಕಳುಹಿಸಿದೆ. ನನ್ನ ಮನೆಯು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ನಾನು ಹಳ್ಳಿಯಲ್ಲಿಯೇ ಉಳಿದುಕೊಂಡಿದ್ದೇನೆ ಎಂದು ಎಲ್‌ಓಸಿ ಬೇಲಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಗ್ರಾಮವಾದ ದಾರೋಕೆಯ ನಿವಾಸಿ ಆಂಗ್ರೆಜ್ ಸಿಂಗ್ ಹೇಳುತ್ತಾರೆ. ಈಗಾಗಲೇ ಈ ಗ್ರಾಮದ 3 ಸಾವಿರ ಮಂದಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆಂದು ಅವರು ಹೇಳಿದರು.

ಆಂಗ್ರೆಜ್‌ಸಿಂಗ್‌ನಂತೆ ಹಲವು ಮಂದಿ ಗ್ರಾಮಸ್ಥರು ಮಹಿಳೆಯರು ಹಾಗೂ ಮಕ್ಕಳನ್ನು ಕಳುಹಿಸಿರುವರಾದರೂ, ಕಳ್ಳರಿಂದ ತಮ್ಮ ಮನೆಯನ್ನು ರಕ್ಷಿಸಲು ಗ್ರಾಮದಲ್ಲಿಯೇ ಉಳಿದುಕೊಂಡಿದ್ದಾರೆ. ಪ್ರಸಕ್ತ ಪರಿಸ್ಥಿತಿಯ ಲಾಭವನ್ನು ಯಾರೂ ಕೂಡಾ ಪಡೆದುಕೊಳ್ಳಬಹುದಾಗಿದೆ. ಗಡಿಗ್ರಾಮಗಳಲ್ಲಿರುವ ಜನರು ತೀವ್ರವಾದ ಒತ್ತಡವನ್ನು ಎದುರಿಸುತ್ತಿದ್ದಾರೆ. ಜನರು ತಮ್ಮ ಮನೆಗಳು, ಜಾನುವಾರುಗಳು ಹಾಗೂ ಬೆಳೆಗಳ ಬಗ್ಗೆ ಆತಂಕಗೊಂಡಿದ್ದಾರೆಂದು ದಾವೊಕೆ ಗ್ರಾಮದ ಸಾಬ್ ಸಿಂಗ್ ಹೇಳುತ್ತಾರೆ.
‘‘ಕಳ್ಳರ ಭೀತಿಯಿಂದ ನಮಗೆ ನಿದ್ರೆಯೇ ಬರುತ್ತಿಲ್ಲ. ರಾತ್ರಿಯಿಡೀ ನಾವು ಖಡ್ಗಗಳನ್ನು ಹಿಡಿದು ಕಾವಲುಕಾಯುತ್ತಿದ್ದೇವೆ’’ ಎಂದು ದಾವೊಕೆ ಗ್ರಾಮದ ಕಾಶ್ಮೀರ್ ಕೌರ್ ಹೇಳುತ್ತಾರೆ.

ಆದರೆ ಸ್ಥಳೀಯಾಡಳಿತವು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ತಾತ್ಕಾಲಿಕ ವಸತಿಗಳಿರುವ ಸ್ಥಳ ಹಾಗೂ ಅವರ ಸಾಗಾಣಿಕೆ ವ್ಯವಸ್ಥೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲು ಸ್ವಲ್ಪ ಸಮಯ ಬೇಕಾಗುತ್ತದೆ ಯೆಂದು ಅದು ಸಮಜಾಯಿಷಿ ನೀಡಿದೆ. ನಮ್ಮ ಕೆಲಸವನ್ನು ನಾವು ನಿರ್ವಹಿಸಿದ್ದೇವೆ. ಗ್ರಾಮಸ್ಥರಿಗೆ ಒದಗಿಸಲಾಗುವ ತಾತ್ಕಾಲಿಕ ಶಿಬಿರಗಳಿರುವ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅವು ಎರಡು ದಿನಗಳೊಳಗೆ ಕಾರ್ಯಾರಂಭಿಸಲಿವೆಯೆಂದು ಅವರು ಹೇಳಿದ್ದಾರೆ.
ಸರಕಾರದ ನೆರವಿಲ್ಲದೆ ಗ್ರಾಮಸ್ಥರು ತಾವಾಗಿಯೇ ಹಳ್ಳಿಗಳಿಂದ ಹೊರತೆರಳಲು ಏರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದೂರದ ನಗರಗಳಲ್ಲಿ ಬಂಧುಗಳಿಲ್ಲದವರ ಕತೆಯೇನು?. ಸ್ವಂತ ವಾಹನವನ್ನು ಹೊಂದಿರದವರು ಇಲ್ಲಿಂದ ಹೇಗೆ ಹೊರಹೋಗಲು ಸಾಧ್ಯ. ಇಲ್ಲಿಗೆ ಬಸ್ ಮತ್ತಿತರ ಸಾರ್ವಜನಿಕ ಸಾರಿಗೆ ವಾಹನಗಳು ಆಗಮಿಸುವುದಿಲ್ಲವೆಂದು ಮುಲ್ಲಾಕೋಟ್ ಗ್ರಾಮದ ನಿವಾಸಿ ಸುರ್ಜಿತ್ ಸಿಂಗ್ ಹೇಳುತ್ತಾರೆ.

ಗಡಿಯಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿರುವುದರಿಂದ ಎಲ್‌ಓಸಿ ಬೇಲಿಯ ಸಮೀಪದಲ್ಲಿರುವ ತಮ್ಮ ಹೊಲಗಳಿಗೆ ತೆರಳದಂತೆ ತಮಗೆ ಬಿಎಸ್‌ಎಫ್ ಯೋಧರು ತಾಕೀತು ಮಾಡಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ.
ಈ ಪರಿಸ್ಥಿತಿ ಎಷ್ಟರವರೆಗೆ ಮುಂದುವರಿಯುವುದೆಂದು ನಮಗೆ ತಿಳಿದಿಲ್ಲ. ಅಲ್ಲಿಯವರೆಗೆ ನಾವು ಅತಂತ್ರ ಪರಿಸ್ಥಿತಿಯಲ್ಲೇ ದಿನದೂಡಬೇಕಾಗಿದೆಯೆಂದು ದಾವೊಕೆ ಗ್ರಾಮದ ಹರ್‌ಜಪ್ ಸಿಂಗ್ ಚಿಂತಾಕ್ರಾಂತರಾಗಿ ಹೇಳುತ್ತಾರೆ.







