ಕಾಳಸಂತೆಯಲ್ಲಿ ಸೀಮೆಎಣ್ಣೆ ಮಾರಾಟ ತಡೆಗಟ್ಟಲು ಹೊಸ ಕ್ರಮ

ಹೊಸದಿಲ್ಲಿ, ಅ.1: ಆಹಾರ ಮತ್ತು ರಸಗೊಬ್ಬರದ ಪೂರೈಕೆ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಲು ಪ್ರಾಯೋಗಿಕ ಕ್ರಮ ಕೈಗೊಂಡ ಬಳಿಕ ಇದೀಗ ಸೀಮೆ ಎಣ್ಣೆ ಸಬ್ಸಿಡಿಯನ್ನು ಕ್ರಮಬದ್ಧಗೊಳಿಸಿ ಕಾಳಸಂತೆಯಲ್ಲಿ ಇದನ್ನು ಮಾರದಂತೆ ತಡೆಯುವುದು ಸರಕಾರದ ಮುಂದಿನ ಕಾರ್ಯಸೂಚಿಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದೇಶದ ಕೆಲ ಭಾಗಗಳಲ್ಲಿ ಸೀಮೆ ಎಣ್ಣೆಯನ್ನು ಇಂಧನವಾಗಿ ಬಳಸಿದರೆ ಇನ್ನು ಕೆಲವೆಡೆ ದುರ್ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ರಾಜ್ಯಗಳು ಸೀಮೆಎಣ್ಣೆ ಮುಕ್ತವಾಗಲು ಕ್ರಮ ಕೈಗೊಳ್ಳುತ್ತಿವೆ ಎಂದು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ತಿಳಿಸಿದರು. ವೈಚಾರಿಕತೆಯ ದೃಷ್ಟಿಯಿಂದ ಸೀಮೆ ಎಣ್ಣೆ ಮುಕ್ತ ರಾಜ್ಯ ಎಂಬುದು ನಮ್ಮ ಮುಂದಿನ ಕಾರ್ಯಸೂಚಿಯಾಗಿದೆ. ಆದರೆ ಸಮಾಜದ ಬಹುಮಂದಿ ಸೀಮೆ ಎಣ್ಣೆಯನ್ನು ಇಂಧನ, ಉರುವಲು ಆಗಿ ಬಳಸುತ್ತಿದ್ದು, ಈ ಸಮಸ್ಯೆಯನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆಯೊಂದನ್ನು ಹುಡುಕಬೇಕಿದೆ ಎಂದರು. ಉದ್ದೇಶಿತ ಫಲಾನುಭವಿಗಳು ಸೀಮೆ ಎಣ್ಣೆ ಸಬ್ಸಿಡಿಯ ಲಾಭ ಪಡೆಯುವಂತಾಗಲು ಸಬ್ಸಿಡಿ ನೇರ ವರ್ಗಾವಣೆ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪಂಜಾಬ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ ಸೇರಿದಂತೆ 9 ರಾಜ್ಯಗಳ 39 ಜಿಲ್ಲೆಗಳಲ್ಲಿ 2016-17ರ ವೇಳೆ ಈ ವ್ಯವಸ್ಥೆ ಜಾರಿಗೆ ಬರಲಿದೆ. ಸೋರಿಕೆ ತಡೆಗಟ್ಟುವುದು, ಭ್ರಷ್ಟಾಚಾರ ತೊಲಗಿಸುವುದು ಮತ್ತು ಸಬ್ಸಿಡಿ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ನೇರ ವರ್ಗಾವಣೆ ವ್ಯವಸ್ಥೆಯಿಂದ ಸಾಧ್ಯವಾಗುತ್ತದೆ. ಇದರಿಂದ ಬಹಳಷ್ಟು ಹಣ ಉಳಿಯಲಿದ್ದು ಈ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಲ್ಲಿ ವಿನಿಯೋಗಿಸಬಹುದಾಗಿದೆ ಎಂದವರು ತಿಳಿಸಿದರು. ಸಮಾಜದ ದುರ್ಬಲ ವರ್ಗದವರಿಗೆ ನೀಡಲಾಗುವ ಸೌಲಭ್ಯಗಳು ಅವರನ್ನು ತಲುಪುವ ಮುನ್ನ ಸಾಕಷ್ಟು ಸೋರಿಕೆಯಾಗಿ ಅತ್ಯಲ್ಪ ಪ್ರಮಾಣವಷ್ಟೇ ಅವರಿಗೆ ದೊರೆಯುತ್ತದೆ. ಇದನ್ನು ಸರಿಪಡಿಸುವುದು ಈ ಪ್ರಕ್ರಿಯೆಯ ಹಿಂದಿರುವ ಯೋಚನೆಯಾಗಿದೆ ಎಂದವರು ತಿಳಿಸಿದರು.





