ಭಾರತದ 'ದಾಳಿ'ಯ ಹೇಳಿಕೆ ಅಪ್ಪಟ ಸುಳ್ಳು: ಪಾಕ್

ವಿಶ್ವಸಂಸ್ಥೆ,ಅ.1: ಗಡಿನಿಯಂತ್ರಣ ರೇಖೆ (ಎಲ್‌ಓಸಿ)ಯಾಚೆಗೆ ಸೀಮಿತ ದಾಳಿಯನ್ನು ನಡೆಸಿರುವೆನೆಂಬ ಭಾರತದ ಹೇಳಿಕೆಯು ಅಪ್ಪಟ ಸುಳ್ಳು ಎಂದು ಪಾಕಿಸ್ತಾನವು ವಿಶ್ವಸಂಸ್ಥೆಗೆ ತಿಳಿಸಿದೆ ಹಾಗೂ ಪ್ರದೇಶದಲ್ಲಿ ಬಿಕ್ಕಟ್ಟು ಉಲ್ಬಣಿಸಿರುವುದಕ್ಕೆ ಭಾರತವೇ ಸಂಪೂರ್ಣ ಹೊಣೆಗಾ ರನಾಗಿದೆ ಯೆಂದು ಅದು ಆಪಾದಿಸಿದೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮಲೀಹಾ ಲೋಧಿ ಶುಕ್ರವಾರ ಬಾನ್ ಕಿ ಮೂನ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ.
‘‘ಪಾಕಿಸ್ತಾನವು ಗರಿಷ್ಠ ಸಂಯಮವನ್ನು ವಹಿಸಿದೆ. ಆದರೆ ಅಕ್ರಮಣ ಅಥವಾ ಪ್ರಚೋದನೆಯ ಯಾವುದೇ ಕೃತ್ಯಕ್ಕೆ ಅತ್ಯಂತ ಶಕ್ತಿಯುತವಾಗಿ ಪ್ರತಿಕ್ರಿಯಿಸುವುದು’’ ಎಂದು ಮಲೀಹಾ ತಿಳಿಸಿದರು.
ಗಡಿನಿಯಂತ್ರಣ ರೇಖೆಯಾಚೆಗಿನ ಉಗ್ರನೆಲೆಗಳ ಸೀಮಿತ ದಾಳಿಯನ್ನು ನಡೆಸಿರುವೆನೆಂಬ ಭಾರತದ ಹೇಳಿಕೆಯಲ್ಲಿ ಹುರುಳಿಲ್ಲವೆಂದು ಮಲೀಹಾ ಹೇಳಿದರು. ಆದರೆ ಇದರಿಂದ ಪಾಕಿಸ್ತಾನದ ವಿರುದ್ಧ ಆಕ್ರಮಣ ನಡೆಸುವ ಇಚ್ಛೆಯನ್ನು ಹೊಂದಿದ್ದೇನೆಂಬುದನ್ನು ಭಾರತ ಸ್ವತಃ ಒಪ್ಪಿಕೊಂಡಂತಾಗಿದೆಯೆಂದು ಮಲೀಹಾ ತಿಳಿಸಿದರು.
ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಬೆದರಿಕೆಗೆ ಕಾರಣವಾಗುವ ಪರಿಸ್ಥಿತಿಯನ್ನು ಭಾರತ ನಿರ್ಮಿಸುತ್ತಿದೆ ಯೆಂದು ಅವರು ಆರೋಪಿಸಿದರು.







