ಸೋಮವಾರ ವಿಧಾನಮಂಡಲ ಅಧಿವೇಶನ

ಬೆಂಗಳೂರು, ಅ.1: ಕಾವೇರಿ ನದಿ ಪಾತ್ರದಿಂದ ತಮಿಳುನಾಡಿಗೆ ಈ ತಿಂಗಳ 6ರ ವರೆಗೆ ಪ್ರತಿನಿತ್ಯ ಆರು ಸಾವಿರ ಕ್ಯೂಸಕ್ ನೀರು ಬಿಡುಗಡೆ ಮಾಡುವಂತೆ ಹಾಗೂ ಕಾವೇರಿ ಜಲ ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವ ಸಂಬಂಧ ಸೋಮವಾರ ಮತ್ತೊಮ್ಮೆ ವಿಧಾನಮಂಡಲದ ಅಧಿವೇಶನ ಕರೆಯಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಈ ಮೂಲಕ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ತಾಕಲಾಟಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ತನ್ನ ವ್ಯಾಪ್ತಿ ಮೀರಿ ಕಾವೇರಿ ಜಲ ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ನೀಡಿರುವ ಆದೇಶವನ್ನು ಪ್ರಶ್ನಿಸಿ ಸೋಮವಾರು ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲು ಸಹ ನಿರ್ಧರಿಸಿದೆ. ಇದರಿಂದಾಗಿ ಕಳೆದ ಅಧಿವೇಶನದಲ್ಲಿ ಕೈಗೊಂಡ ನಿರ್ಧಾರದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ಮುಂದೂಡಿದಂತೆ ಆಗಿದೆ. ಸದ್ಯಕ್ಕೆ ನೀರು ಬಿಡುಗಡೆ ಇಲ್ಲ ಎನ್ನುವ ಸಂದೇಶವನ್ನು ಸರಕಾರ ನೀಡಿದೆ.
ತೀರ್ಪಿನ ಹಿನ್ನೆಲೆಯಲ್ಲಿ ಉದ್ಘವವಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ಮುಖಂಡರ ಸಭೆ ಮತ್ತು ಮಂತ್ರಿ ಪರಿಷತ್ ಸಭೆಗಳಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಅಧಿವೇಶನದ ಮೂಲಕ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಒಂದೇ ವಿಚಾರದಲ್ಲಿ ಎರಡು ಬಾರಿ ವಿಶೇಷ ಅಧಿವೇಶನ ಕರೆದ ದಾಖಲೆಗೂ ಸಹ ಈ ಬೆಳವಣಿಗೆ ಸಾಕ್ಷಿಯಾಯಿತು.
ಮಂತ್ರಿ ಪರಿಷತ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ಒಂದೇ ದಿನ ಮೂರು ವಿವಿಧ ರೀತಿಯ ಆದೇಶಗಳನ್ನು ನೀಡಿದೆ. ಇದು ಲೋಪದಿಂದ ಕೂಡಿದ ಆದೇಶವಾಗಿದ್ದು, ಇದನ್ನು ನ್ಯಾಯಪೀಠದ ಮುಂದೆ ಪ್ರಶ್ನಿಸುತ್ತೇವೆ. ಜತೆಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ನೀರು ಬಿಡುಗಡೆ ಮಾಡದಿದ್ದರೆ ನ್ಯಾಯಾಂಗ ಕಠಿಣ ನಿಲುವು ತಳೆಯಬೇಕಾಗುತ್ತದೆ ಎಂದು ನೀಡಿರುವ ಎಚ್ಚರಿಕೆಯ ಬಗ್ಗೆ ಪ್ರಶ್ನಿಸಿದಾಗ, ನ್ಯಾಯಾಲಯ ಯಾವುದೇ ಶಬ್ದ ಉಪಯೋಗಿಸಿರಬಹುದು. ಆದರೆ ನಾವು ಉದ್ದೇಶ ಪೂರ್ವಕವಾಗಿ ಆದೇಶವನ್ನು ಉಲ್ಲಂಘಿಸಿಲ್ಲ. ವಿಧಾನಮಂಡಲದಲ್ಲಿ ನೀರು ಬಿಡುಗಡೆಯನ್ನು ಮುಂದೂಡಲು ತೀರ್ಮಾನಿಸಲಾಗಿತ್ತು. ಈಗ ಮತ್ತೆ ಅಧಿವೇಶದನಲ್ಲಿ ಸರಕಾರ ತನ್ನ ನಿಲವು ಏನು ಎನ್ನುವುದನ್ನು ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ನಡೆದ ಸರ್ವಪಕ್ಷ ಮುಖಂಡರ ಸಭೆಯಲ್ಲಿ ನೀರು ಬಿಡುಗಡೆ ಮಾಡಲು ತೀವ್ರ ವಿರೋಧ ವ್ಯಕ್ತವಾಯಿತು. ಸರಕಾರ ನ್ಯಾಯಾಂಗ ನಿಂದನೆಗೆ ಹೆದರಿಕೊಂಡು ನೀರು ಬಿಡಬಾರದು. ನೀರು ಹರಿಸಿದರೆ ಈವರೆಗೆ ನಡೆಸಿದ ಹೋರಾಟಕ್ಕೆ ಬೆಲೆ ಇರುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಕಾವೇರಿ ನ್ಯಾಯಮಂಡಳಿಗೆ ಸದಸ್ಯರನ್ನು ನೀಡಬಾರದು. ಅಗತ್ಯಬಿದ್ದರೆ ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸುಪ್ರೀಂ ಕೋರ್ಟ್‌ಗೆ ಪ್ರತ್ಯೇಕವಾಗಿ ಪ್ರಮಾಣ ಪತ್ರ ಸಲ್ಲಿಸಿ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬಾರದು. ಈ ತೀರ್ಮಾನದ ಜತೆ ನಾವೂ ಕೂಡ ಇದ್ದೇವೆ. ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾದರೆ ನಮ್ಮ ಮೇಲೂ ಸಹ ಕ್ರಮ ಕೈಗೊಳ್ಳಿ ಎಂದು ಪ್ರಮಾಣ ಪತ್ರ ಸಲ್ಲಿಸೋಣ ಎಂಬ ಸಲಹೆಯನ್ನು ಜೆಡಿಎಸ್ ನೀಡಿತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯ ಸರಕಾರ ಕೈಗೊಳ್ಳುವ ತೀರ್ಮಾನಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ಸಂಸದರಾಗಿ, ಪಕ್ಷದ ಮುಖಂಡರಾಗಿ ಸರಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸರಕಾರ ಈಗಿನ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡಬಾರದು ಎಂಬ ಸಲಹೆ ನೀಡಲಾಗಿದೆ.ಒಟ್ಟಾರೆ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ ನೀಡುತ್ತೇವೆ ಎಂದರು.
ಜೆ.ಡಿ.ಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಕಾವೇರಿ ಜಲ ನಿರ್ವಹಣಾ ಮಂಡಳಿ ಸ್ಥಾಪಿಸುವ ಸಂಬಂಧ ರಾಜ್ಯ ಸರ್ಕಾರ ಸದಸ್ಯರ ಹೆಸರನ್ನು ನೀಡಬಾರದು. ಈಗಿನ ಪರಿಸ್ಥಿತಿಯಲ್ಲಿ ನೀರು ಬಿಡುಗಡೆ ಮಾಡುವುದು ಸರಿಯಲ್ಲ. ಸರಕಾರ ಯಾವುದಕ್ಕೂ ಹೆದರಬೇಕಾಗಿಲ್ಲ ಎಂದು ಹೇಳಿದರು.
ಜೆ.ಡಿ.ಎಸ್ ಉಪನಾಯಕ ವೈ.ಎಸ್.ವಿ ದತ್ತ, ನೀರು ಬಿಡುಗಡೆಗೆ ನಮ್ಮ ಪಕ್ಷ ವಿರೋಧಿಸಿದೆ ಎಂದರು.
ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರುದ್ಧ ಇಡೀ ದಿನ ಧರಣಿ ನಡೆಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ,ಪ್ರಧಾನಿ ನರೇಂದ್ರ ಮೋದಿ ಭರವಸೆ ಮೇರೆಗೆ ಸತ್ಯಾಗ್ರಹವನ್ನು ಕೊನೆಗೊಳಿಸಿದರು.
ಕೇಂದ್ರ ಸಚಿವ ಅನಂತ ಕುಮಾರ್ ಗೌಡರನ್ನು ಭೇಟಿಮಾಡಿ ಮಾತುಕತೆ ನಡೆಸಿದ ನಂತರ ನಿರಶನ ಅಂತ್ಯ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ಸುಪ್ರೀಂಕೋರ್ಟ್ ಕೋರ್ಟ್‌ನ ತೀರ್ಪಿನ ಬಗ್ಗೆ ನಿನ್ನೆ ಪ್ರಧಾನಿ ಮೋದಿ ಜೊತೆ ಮಾತಾಡಿದ್ದೇನೆ. ಅವರ ಪ್ರತಿನಿಧಿಯಾಗಿ ಇಬ್ಬರು ಕೇಂದ್ರ ಮಂತ್ರಿಗಳು ಬಂದು ಮನವಿ ಮಾಡಿದ್ದಾರೆ. ಆದ ಕಾರಣ ಸತ್ಯಾಗ್ರಹ ಹಿಂದಕ್ಕೆ ಪಡೆಯುತ್ತಿದ್ದೇನೆ. ಜನರಿಗೆ ಅನ್ಯಾಯವಾದರೆ ಮತ್ತೆ ನಾನು ನನ್ನ ಹೋರಾಟ ಮುಂದುವರೆಸುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಗೌಡರನ್ನು ಭೇಟಿ ಮಾಡಿ ನಿರಶನ ಕೊನೆಗೊಳಿಸುವಂತೆ ಒತ್ತಡ ಹೇರಿದ್ದರು. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಂತ್ರಿಗಳು ಬಂದು ಮನವಿ ಮಾಡಿಕೊಂಡಿದ್ದರು. ಆದರೆ ಇವರೆಲ್ಲರಿಗೂ ತಾವು ಅಭಾರಿ ಎಂದು ದೇವೇಗೌಡರು ಹೇಳಿದರು.







