ಕುಲಪತಿಯಿಂದ ಪದವಿ ಸ್ವೀಕಾರಕ್ಕೆ ಪಿಎಚ್‌ಡಿ ವಿದ್ಯಾರ್ಥಿ ತಿರಸ್ಕಾರ
ವೇಮುಲಾ ಪ್ರಕರಣ
ಹೈದರಾಬಾದ್, ಅ.1: ಕಳೆದ ವರ್ಷ ಪಿಎಚ್‌ಡಿ ವಿದ್ಯಾರ್ಥಿ ರೋಹಿತ ವೇಮುಲಾ ಮತ್ತು ಇತರರೊಂದಿಗೆ ವಿವಿ ಹಾಸ್ಟೆಲ್‌ನಿಂದ ಅಮಾನತುಗೊಂಡಿದ್ದ ಹೈದರಾಬಾದ್ ವಿಶ್ವವಿದ್ಯಾ ನಿಲಯದ ಸಂಶೋಧನಾ ವಿದ್ಯಾರ್ಥಿ ವೆಲ್ಪುಲ ಸಂಕಣ್ಣ ಅವರು ಶನಿವಾರ ತನ್ನ ಡಾಕ್ಟರೇಟ್ ಪದವಿಯನ್ನು ಕುಲಪತಿ ಅಪ್ಪಾರಾವ್ ಪೊಡಿಲೆ ಅವರಿಂದ ಸ್ವೀಕರಿಸಲು ನಿರಾಕರಿಸಿದರು.
ಘಟಿಕೋತ್ಸವ ಸಮಾರಂಭದಲ್ಲಿ ತನ್ನ ಹೆಸರು ಕರೆಯಲ್ಪಟ್ಟಾಗ ಸಂಕಣ್ಣ ವೇದಿಕೆಗೆ ತೆರಳಿದರಾದರೂ ಪದವಿ ಪ್ರಮಾಣಪತ್ರವನ್ನು ಪೊಡಿಲೆಯವರಿಂದ ಸ್ವೀಕರಿಸಲು ನಿರಾಕರಿ ಸಿದರು. ಈ ವೇಳೆ ವೇದಿಕೆಯಲ್ಲಿದ್ದ ಪ್ರತಿಕುಲಪತಿ ವಿಪಿನ್ ಶ್ರೀವಾಸ್ತವ ಅವರು ಪಿಎಚ್‌ಡಿ ಪ್ರಮಾಣಪತ್ರವನ್ನು ಅವರಿಗೆ ಹಸ್ತಾಂತರಿಸಿದರು.
ಕಳೆದ ವರ್ಷ ‘ಶಿಸ್ತು ಕ್ರಮ’ವಾಗಿ ಹಾಸ್ಟೆಲ್‌ನಿಂದ ಅಮಾನತುಗೊಂಡಿದ್ದ ಐವರು ವಿದ್ಯಾರ್ಥಿಗಳಲ್ಲಿ ವೇಮುಲಾ ಮತ್ತು ಸಂಕಣ್ಣ ಸೇರಿದ್ದರು. ನಂತರ ಈ ಅಮಾನತನ್ನು ಹಿಂದೆಗೆದುಕೊಳ್ಳಲಾಗಿತ್ತು.
ಈ ವರ್ಷದ ಜನವರಿಯಲ್ಲಿ ವೇಮುಲಾ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ, ಪೊಡಿಲ್ಲೆ ವಜಾಕ್ಕೆ ಆಗ್ರಹಿಸಿ ವಿವಿ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದರು.
ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಪೊಡಿಲೆಯವರ ಪಾತ್ರಕ್ಕೆ ಪ್ರತಿಭಟನೆಯಾಗಿ ತಾನು ಅವರಿಂದ ಪ್ರಮಾಣಪತ್ರವನ್ನು ಸ್ವೀಕರಿಸಲಿಲ್ಲ ಎಂದು ಹಾಲಿ ಐಐಟಿ ಬಾಂಬೆಯಲ್ಲಿ ತತ್ತ್ವಶಾಸ್ತ್ರದಲ್ಲಿ ಪೋಸ್ಟ್-ಡಾಕ್ಟರಲ್ ಕೋರ್ಸ್ ಮಾಡುತ್ತಿರುವ ಸಂಕಣ್ಣ ಸುದ್ದಿಸಂಸ್ಥೆಗೆ ತಿಳಿಸಿದರು.
ವೇಮುಲ ಆತ್ಮಹತ್ಯೆಗೆ ಕುಲಪತಿ ಅಪ್ಪಾರಾವ್ ಪೊಡಿಲೆ ಮತ್ತು ಇತರರು ಹೊಣೆಗಾರ ರೆಂದು ವಿವಿ ವಿದ್ಯಾರ್ಥಿಗಳು,ಕೆಲವು ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಆರೋಪಿಸಿದ್ದರು. ತನ್ನಿಂದ ಪ್ರಮಾಣಪತ್ರ ಪಡೆಯಬೇಕೋ ಬೇಡವೋ ಎನ್ನುವುದು ವಿದಾರ್ಥಿಯ ಆಯ್ಕೆಯಾಗಿದೆ ಎಂದು ಹೇಳುವ ಮೂಲಕ ಘಟನೆಯನ್ನು ಲಘುವಾಗಿ ಪರಿಗಣಿಸಿರುವ ಪೊಡಿಲ್ಲೆ, ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದರು.





