ಭೂವಿವಾದ: ಪೊಲೀಸರ ಗುಂಡಿಗೆ ನಾಲ್ವರು ಬಲಿ
7 ಅಧಿಕಾರಿಗಳಿಗೆ ಗಾಯ
ಜಾರ್ಖಂಡ್, ಅ.1: ಎನ್‌ಟಿಪಿಸಿ (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್) ತಮ್ಮ ಭೂಮಿಯನ್ನು ಸ್ವಾಧೀನಪಡಿಸುವುದನ್ನು ವಿರೋಧಿಸಿ ಸ್ಥಳೀಯರು ನಡೆಸಿದ ಪ್ರತಿಭಟನೆ ಸಂದರ್ಭ ಪೊಲೀಸರು ಗುಂಡು ಹಾರಿಸಿದಾಗ ನಾಲ್ವರು ಗ್ರಾಮಸ್ಥರು ಮೃತಪಟ್ಟ ಘಟನೆ ಜಾರ್ಖಂಡ್‌ನ ಹಝಾರಿಬಾಗ್ ಜಿಲ್ಲೆಯ ಚಿರುಡಿ ಎಂಬಲ್ಲಿ ನಡೆದಿದೆ.
ಪ್ರತಿಭಟನಾಕಾರರು ಅಧಿಕಾರಿಗಳನ್ನು ಅಪಹರಿಸಿ ಥಳಿಸುತ್ತಿದ್ದಾಗ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು. ಘಟನೆಯಲ್ಲಿ 4 ಮಂದಿ ಮೃತಪಟ್ಟಿದ್ದು ಏಳು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಐಜಿ ಎಂ.ಎಸ್. ಭಾಟಿಯಾ ತಿಳಿಸಿದ್ದಾರೆ.
ಎನ್‌ಟಿಪಿಸಿಯವರು ಪಾಕ್ರಿ-ಬರ್ಕಾಗಾಂವ್ ಎಂಬಲ್ಲಿ ತಮಗೆ ಸೇರಿದ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿ ಸ್ಥಳೀಯ ಶಾಸಕ , ಸ್ಥಳೀಯರಾದ ಯೋಗೇಂದ್ರ ಸಾಹು, ಆತನ ಪತ್ನಿ ನಿರ್ಮಲಾ ದೇವಿ ಮತ್ತವರ ಬೆಂಬಲಿಗರು ಸೆ.15ರಿಂದ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಬಿಗುವಿನ ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತವು ಸ್ಥಳಕ್ಕೆ ನ್ಯಾಯಾಧೀಶರು ಮತ್ತು ಪೊಲೀಸರನ್ನು ಕಳಿಸಿತ್ತು.ಪೊಲೀಸರು ಶಾಸಕರನ್ನು ವಶಕ್ಕೆ ಪಡೆದುಕೊಂಡು ವಾಪಸಾಗುತ್ತಿದ್ದಾಗ ಗುಂಪೊಂದು ಪೊಲೀಸ್ ವಾಹನವನ್ನು ಅಡ್ಡಗಟ್ಟಿ, ಅಡಿಷನಲ್ ಎಸ್ಪಿ ಮತ್ತು ವೃತ್ತ ನಿರೀಕ್ಷಕರನ್ನು ವಾಹನದಿಂದ ಬಲವಂತವಾಗಿ ಕೆಳಗಿಳಿಸಿ ಅವರನ್ನು ಸಮೀಪದ ಹೊಲವೊಂದಕ್ಕೆ ಕೊಂಡೊಯ್ದು ಥಳಿಸಿತು. ಇಬ್ಬರೂ ಗಂಭೀರ ಗಾಯಗೊಂರು. ಕೂಡಲೇ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದ್ದು ಗುಂಪನ್ನು ನಿಯಂತ್ರಿಸಲು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು. ಘಟನೆಯಲ್ಲಿ ನಾಲ್ವರು ಪ್ರತಿಭಟನಾಕಾರರು ಮೃತಪಟ್ಟಿದ್ದು 7 ಅಧಿಕಾರಿಗಳು ಗಾಯಗೊಂಡಿದ್ದಾರೆ . ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಇವರನ್ನು ಹೆಲಿಕಾಪ್ಟರ್ ಮೂಲಕ ರಾಂಚಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





