ಆಧಾರ ರಹಿತ ಮತಾಂತರ ಆರೋಪ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮಕ್ಕೆ ಸಚಿವರ ಆಗ್ರಹ

ಮಂಗಳೂರು, ಅ.1: ಇತ್ತೀಚೆಗೆ ಸುಳ್ಯದಲ್ಲಿ ಯುವಕರಿಬ್ಬರು ಮತಾಂತರಗೊಡಿದ್ದಾರೆ ಎಂದು ಆಧಾರ ರಹಿತವಾಗಿ ಆರೋಪ ಮಾಡಿ ಉದ್ವೇಗಕಾರಿ ಭಾಷಣ ಮಾಡಿ ಸಾಮಾಜಿಕ ನೆಮ್ಮದಿ ಕೆಡಿಸುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್‌ರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.
ಸುಳ್ಯದಲ್ಲಿ ಇತ್ತೀಚೆಗೆ ಇಬ್ಬರು ಯವಕರು ಕಾಣೆಯಾಗಿದ್ದರು. ಆದರೆ, ಅವರನ್ನು ಮತಾಂತರ ಮಾಡಲಾಗಿದೆ ಎಂಬ ಗುಲ್ಲೆಬ್ಬೆಸಿ ಒಂದು ಸಮುದಾಯದ ವಿರುದ್ಧ ದ್ವೇಷದ ಭಾಷಣ ಮಾಡಿ ಜನರನ್ನು ಉದ್ರೇಕಿಸಿದ್ದರು. ಆದರೆ, ಬಳಿಕ ಯುವಕರು ಮನೆಗೆ ಮರಳಿ ತಾವು ಮತಾಂತರ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಧರ್ಮ, ಹಾಗೂ ಸಮುದಾಯ ವಿಷಯಕ್ಕೆ ಸಂಬಂಧಿಸಿ ಪ್ರಭಾಕರ ಭಟ್ ಅವರು ಹಲವು ಬಾರಿ ಇಂತಹ ದ್ವೇಷ ಕಾರುವ ಭಾಷಣವನ್ನು ಮಾಡಿ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದಾರೆ. ಆದ್ದರಿಂದ ಈ ಬಾರಿ ಸುಳ್ಯದಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಚಿವರು ಜಿ.ಪರಮೇಶ್ವರ್‌ರನ್ನು ಒತ್ತಾಯಿಸಿದ್ದಾರೆ.





