ರಾಜ್ಯದ ವಕೀಲರ ತಂಡದ ಕಾರ್ಯವೈಖರಿಗೆ ಬಿಜೆಪಿ ಅಸಮಾಧಾನ
ಬೆಂಗಳೂರು, ಅ.1: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಪದೇ ಪದೇ ಹಿನ್ನಡೆಯಾಗುತ್ತಿರುವುದಕ್ಕೆ ನಮ್ಮ ರಾಜ್ಯದ ವಕೀಲರ ತಂಡದ ಕಾರ್ಯವೈಖರಿಯೆ ಕಾರಣ ಎಂದು ಪ್ರತಿಪಕ್ಷ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದಂತಹ ಸರ್ವಪಕ್ಷಗಳ ಸಭೆಯಲ್ಲಿ ರಾಜ್ಯದ ವಕೀಲರ ತಂಡದ ಮುಖ್ಯಸ್ಥ ಹಿರಿಯ ನ್ಯಾಯವಾದಿ ಫಾಲಿ ಎಸ್.ನಾರಿಮನ್ ವಾದ ಮಾಡುವ ವೈಖರಿಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿರುವ ವಕೀಲ ಮೋಹನ್ ಕಾತರಕಿ, ನಾರಿಮನ್ ವಾದ ಮಾಡುವ ವೈಖರಿಯಲ್ಲಿ ಯಾವುದೆ ಲೋಪಗಳಿಲ್ಲ. ಕಾನೂನು ಹೋರಾಟದಲ್ಲಿ ನಾವು ಭರವಸೆ ಕಳೆದುಕೊಳ್ಳುವುದು ಬೇಡ ಎಂದು ಸಭೆಯಲ್ಲಿ ಸಮಜಾಯಿಷಿ ನೀಡಿದ್ದಾರೆ ಎಂದು ಹೇಳಲಾಗಿದೆ. ವಕೀಲರ ತಂಡ ಬದಲಾವಣೆಗೆ ಒತ್ತಡ: ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ನೇತೃತ್ವದ ತಂಡವನ್ನು ಬದಲಾವಣೆ ಮಾಡುವಂತೆ ಸಭೆಯಲ್ಲಿ ಕೆಲ ಬಿಜೆಪಿ ನಾಯಕರು ಸರಕಾರಕ್ಕೆ ಸಲಹೆ ನೀಡಿದರು. ಆದರೆ, ಪರ್ಯಾಯ ಕಾನೂನು ತಂಡ ರಚನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ವಿವರಣೆ ನೀಡಿದರು ಎನ್ನಲಾಗಿದೆ.
ಮಾತಿನ ಚಕಮಕಿ: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರವು ಸರ್ವಪಕ್ಷಗಳ ಸಭೆಯಲ್ಲಿ ಕೆಲಕಾಲ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ರಾಜ್ಯ ಸರಕಾರವು ಕಾವೇರಿ ನ್ಯಾಯಾಧೀಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಎಸ್‌ಎಲ್‌ಪಿಯ ವಿಚಾರಣೆ ಮುಗಿಯುವದಕ್ಕಿಂತ ಮುಂಚಿತವಾಗಿ, ಕೇಂದ್ರ ಸರಕಾರದ ಅಟಾರ್ನಿ ಜನರಲ್ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸಿದ್ಧವಿರುವುದಾಗಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದರಾದ ಪ್ರಕಾಶ್ ಹುಕ್ಕೇರಿ ಹಾಗೂ ಆರ್.ಧೃವನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದ ಕಾನೂನು ತಂಡದ ಕಾರ್ಯವೈಖರಿಯನ್ನು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ. ಈಗ ಕೇಂದ್ರ ಸರಕಾರ ನಡೆದುಕೊಂಡಿರುವ ರೀತಿ ಬಗ್ಗೆ ಬಿಜೆಪಿ ಸಂಸದ ಯಡಿಯೂರಪ್ಪ ಸೇರಿದಂತೆ ಇನ್ನಿತರರು ಏನು ಹೇಳುತ್ತಾರೆ ಎಂದು ಪ್ರಕಾಶ್ ಹುಕ್ಕೇರಿ ಪ್ರಶ್ನೆ ಮಾಡಿದರು. ಇದರಿಂದಾಗಿ ಕೆಲಕಾಲ ಉಭಯ ಪಕ್ಷಗಳ ಸಂಸದರ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರನ್ನೂ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.





