ಗಾಂಧೀ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಮಂಗಳೂರು, ಅ.2: ಮಂಗಳೂರು ಮಹಾನಗರ ಪಾಲಿಕೆ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಮತ್ತು ಎಂ. ವಿ. ಶೆಟ್ಟಿ ಕಾಲೇಜು ಆಫ್ ಸೋಶಿಯಲ್ ವರ್ಕ್ಸ್ ಆಶ್ರಯದಲ್ಲಿ ಇಂದು ನಗರದ ಉರ್ವಮಾರ್ಕೆಟ್ ನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದ ಸ್ವಚ್ಚತಾ ಅಭಿಯಾನ ಮತ್ತು ಜಾಥಾ ನಡೆಯಿತು.
ಮಂಗಳೂರು ಮನಪಾ ಮಾಜಿ ಸದಸ್ಯ ಕಮಲಾಕ್ಷ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮನಪಾ ಸದಸ್ಯ ರಾಧಾಕೃಷ್ಣ, ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಕಂಡ ಕನಸನ್ನು ನನಸು ಮಾಡಬೇಕಾಗಿದೆ. ಶಾಲೆಯಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮನಪಾ ಪರಿಸರ ಅಧಿಕಾರಿ ಶಬರಿ, ಸ್ವಚ್ಛತೆಯಲ್ಲಿ ದೇಶದಲ್ಲಿ ಮೂರನೆ ಸ್ಥಾನದಲ್ಲಿರುವ ಮಂಗಳೂರು ಮನಪಾ ಮೊದಲನೆ ಸ್ಥಾನ ಪಡೆಯಬೇಕಾಗಿದೆ . ಜನವರಿ ಯಲ್ಲಿ ಸ್ವಚ್ಛ ಸರ್ವೇಕ್ಷಣ ತಂಡ ಮಂಗಳೂರಿಗೆ ಬರಲಿದ್ದು, ನಗರವನ್ನು ಸ್ವಚ್ಛವಾಗಿಟ್ಟು ದೇಶದಲ್ಲಿ ಮೊದಲನೆ ಸ್ಥಾನ ಪಡೆಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಮ್ಯಾನೆಜಿಂಗ್ ಡೈರೆಕ್ಟರ್ ಝುಬೈರ್ ಎಂ.ಪಿ., ಎಂ.ವಿ ಶೆಟ್ಟಿ ಕಾಲೇಜು ಮತ್ತು ಸೋಶಿಯಲ್ ವರ್ಕ್ಸ್ ನ ಪ್ರಾಂಶುಪಾಲೆ ಡಾ.ಸುಮಾ ಎಸ್. ರೈ , ಉಪಸ್ಥಿತರಿದ್ದರು.







