ಜನನುಡಿಯಲ್ಲಿ ರಘೋತ್ತಮ ಹೊಬ

ಚಲೋಉಡುಪಿಯನ್ನು ನಾವು ಬೆಂಬಲಿಸಬೇಕು: ಏಕೆಂದರೆ...
ಕಳೆದ ಭಾನುವಾರ ನನ್ನ ಶ್ರೀಮತಿ ಸಂಡೆ ಸ್ಪೆಷಲ್ ನಾನ್ ವೆಜ್ ಮಾಡೋಣ ಎಂದರು. ನಾನು ಏನು ತರಲಿ ಎನ್ನಲು ಅವರು 'ಚಿಕನ್ ಆದ್ರೆ ಮಕ್ಕಳು ತಿನ್ನೋಲ್ಲ. ದೊಡ್ಡದ್ ತಕ್ಕಬನ್ನಿ. ಅದಾದ್ರೆ ಮಕ್ಕಳು ತಿಂತಾರೆ' ಎಂದರು. ಸರಿ, ಎಂದು ನಾನು ನನ್ನ ಸ್ಕೂಟರ್ ಏರಿ ಮೈಸೂರಿನ ಬೀದಿ ಬೀದಿಗಳಲ್ಲಿ ಹೊರಟೆ. ಫಿಲೋಮಿನಾ ಚರ್ಚ್ ಬಳಿ ಸಿಗುತ್ತದೆ ಎಂಬ ಮಾಹಿತಿ ಇದ್ದದ್ದರಿಂದ ಚರ್ಚ್ ಕಡೆ ಹೊರಟೆ . ಅಲ್ಲಿ ಬೀಫ್ ಇಲ್ಲಿ ಎಲ್ಲಿ ಸಿಗುತ್ತೆ ಎಂದು ಕೇಳಲು ಮನಸ್ಸು ಹಿಂಜರಿದಿದ್ದರಿಂದ ಮಟನ್ ಅಂಗಡಿ ಎಲ್ಲಿದೆ ಎಂದು ಹೊಟೆಲ್ ನವನೊಬ್ಬನನ್ನು ಕೇಳಿದೆ. ಅವರು ಗಲ್ಲಿಯೊಂದರ ಕಡೆ ತೋರಿಸಲು ಅಲ್ಲಿ ಸಾಲು ಸಾಲು ಮಟನ್ ಚಿಕನ್ ಅಂಗಡಿ ಗಳಿದ್ದವು. ದನದ ಮಾಂಸ ಆದರೆ ಮಟನ್ ತೂಗು ಹಾಕಿರುವುದು ಸ್ವಲ್ಪ ದೊಡ್ಡದಾಗಿ ಕಾಣುತ್ತಾದ್ದರಿಂದ observe ಮಾಡುತ್ತ ಮುಂದೆ ಸಾಗಲು ಅದೆಲ್ಲ ಕುರಿ ಮಾಂಸ ಎಂದು ತಿಳಿಯಿತು. ಆದರೂ ಅವರನ್ನೆ ವಿಚಾರಿಸೋಣ ಎಂದು "ಇಲ್ಲಿ ಬೀಫ್ ಮಟನ್ ಎಲ್ಲಿ ಸಿಗುತ್ತೆ?" ಎಂದೆ ಅವರು ಮುಸಲ್ಮಾನ ಬಾಂಧವರಾದರು ಕಿವಿ ಹತ್ತಿರಕ್ಕೆ ಬಂದು ದೂರದ ಗಲ್ಲಿಯೊಂದರಲ್ಲಿ ಸಿಗುತ್ತದೆ ಎಂದು ದಾರಿ ತೋರಿದರು.
ಹೇಗೋ ಕಷ್ಟ ಪಟ್ಟು ಅಂಗಡಿ ಹುಡುಕಿ ಅರ್ಧ ಕೆಜಿ ದನದ ಮಾಂಸ ತೆಗೆದುಕೊಂಡು ಗಾಡಿಯ ಡಿಕ್ಕಿಗೆ ಹಾಕುತ್ತಿದ್ದಂತೆ ಯಾರಾದರೂ ನೋಡಿಯಾರಾ ಎಂಬ ಆತಂಕ. ದಾರಿಯುದ್ದಕ್ಕೂ ಬರುತ್ತಿರಲು ನಾನು ಇನ್ನೊಬ್ಬ ದಾದ್ರಿಯ ಮಹಮ್ಮದ್ ಇಖ್ಲಾಕ್ ಆಗಿಬಿಡುವೆನಾ ಎಂದು ಯೋಚಿಸತೊಡಗಿದ ಮನಸ್ಸು. ಇಖ್ಲಾಕರಾದರೋ ಕುರಿಮಾಂಸ ಇಟ್ಟುಕೊಂಡಿದ್ದರು ಎಂಬ ರಿಪೋರ್ಟ್ ಪಡೆದರು. ಆದರೆ ನಾನು ದನದ ಮಾಂಸ ಹೊತ್ತು ಸಾಗುತ್ತಿದ್ದೇನೆ. ಮನೆಯಲ್ಲಿ ಹೋದಾಗ ಶ್ರೀಮತಿ ಕೂಡ ಅದನ್ನೆ ಕೇಳಿದರು "ಯಾರಾದರೂ ನೋಡಿದರೇನ್ರಿ?' ನಾನೆಲ್ಲೋ ಯಾರಾದರೂ ಹಿಂದುತ್ವವಾದಿಗಳು ಇವರ ಮೇಲೆ ಅಟ್ಯಾಕ್ ಮಾಡಿದರೆ ಏನಪ್ಪ ಎಂದುಕೊಳ್ಳುತ್ತಿದ್ದೆ" ಎಂದು ಜೋಕ್ ಮಿಶ್ರಿತ ಶೈಲಿಯಲ್ಲಿ ಹೇಳಿದರು. ನನ್ನಿಬ್ಬರು ಮಕ್ಕಳು ಇದಾವುದರ ಪರಿವೆ ಇಲ್ಲದೆ ಕಾರ್ಟೂನ್ ನೋಡುತ್ತ ಅವರ ಅಮ್ಮ ಮಾಡಿಕೊಟ್ಟ ಬೀಫ್ ಫ್ರೈ ಮತ್ತು ಚಪಾತಿ ತಿನ್ನುತ್ತಾಹೋದರೂ ನನ್ನ ಮನಸ್ಸು ಮಾತ್ರ ದನದ ಮಾಂಸ ತರುವಾಗಿನ ಉಂಟಾದ ಆತಂಕದತ್ತಲೇ ಮನೆಮಾಡಿತ್ತು.
ಹೌದು, ಆಹಾರ ಇಂದು ನಮ್ಮ ಹಕ್ಕಾಗಿ ಉಳಿದಿಲ್ಲ . ಬೇರೆಯವರ ಮರ್ಜಿಗೆ ನಾವು ತಿನ್ನಬೇಕಿದೆ ತಿನ್ನುವುದನ್ನು ಆರಿಸಿಕೊಳ್ಳಬೇಕಿದೆ. ಇದು ಪ್ರಜಾಪ್ರಭುತ್ವದ ಲಕ್ಷಣವೇ? ಇಲ್ಲ . ದಬ್ಬಾಳಿಕೆಯ, ದೌರ್ಜನ್ಯದ ಪರಾಕಾಷ್ಠೆ. ನಮ್ಮಗಳ ಮೇಲಿನ ಸವಾರಿ. ಹೀಗೆ ಆದರೆ ಇವರ ಮರ್ಜಿಗೆ ಓಟು ಹಾಕಬೇಕಾಗುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಓಟಿನ ಹಕ್ಕನ್ನು ಮಾರಿ ನಮ್ಗಗಳ ಮುಂದಿನ ಜನರೇಷನ್ ಅನ್ನು ಇವರ ಪಾದತಳಕ್ಕೆ ಹಾಕಬೇಕಾಗುತ್ತದೆ a worst situation than ever before ಇದಾಗುತ್ತದೆ.
ಈ ನಿಟ್ಟಿನಲ್ಲಿ ಆಹಾರದ ಹಕ್ಕಿನ ಹೋರಾಟದ ಚಲೋ ಉಡುಪಿಯ ಈ ಗುರಿ ಶೋಷಿತರಿಗೆ ಆತ್ಮಾಭಿಮಾನ ತಂದುಕೊಡುವಂತದ್ದು. ಹಾಗೆಯೇ ಶೋಷಿತರ ನಡುವೆ ಇರುವ ಶೌಚಾಲಯ ಶುಚಿಗೊಳಿಸುವುದು, ಸತ್ತ ದನ ತೆಗೆಯುವುದು, ಸತ್ತ ಪ್ರಾಣಿಗಳ ದೇಹ ಎತ್ರುವುದು, ಚಪ್ಪಲಿ ಹೊಲಿಯುವುದು, ಕಕ್ಕಸ್ಸು ಗುಂಡಿಗಳ ಶುಚಿಗೊಳಿಸುವುದು, ಚರಂಡಿ ಶುಚಿಗೊಳಿಸುವುದು... ಇತ್ಯಾದಿ ಕೊಳಕು ವೃತ್ತಿಗಳ ವಿರುದ್ಧವೂ ಈ ಸಮಾವೇಶ ದನಿ ಎತ್ತಲಿ, ಆ ಉದ್ಯೋಗಗಳಲ್ಲಿ ತೊಡಗಿಕೊಳ್ಳುವುದಿಲ್ಲವೆಂಬ ಶಪಥವನ್ನು ಸಾಮೂಹಿಕವಾಗಿ ಸ್ವೀಕರಿಸಲಿ ಎಂಬುದು ಮನವಿ. ವಯಕ್ತಿಕವಾಗಿ ನನ್ನ ಮಾತೃ ಸಂಘಟನೆ ಬಹುಜನ ವಿದ್ಯಾರ್ಥಿ ಸಂಘ(ಬಿವಿಎಸ್) ಕೂಡ ಇದಕ್ಕೆ ಬೆಂಬಲ ಸೂಚಿಸಿದೆ. ಬಿವಿಎಸ್ ಸದಾ ಇಂತಹ ಮಾನವೀಯ ಹೋರಾಟಗಳನ್ನು ಬೆಂಬಲಿಸುತ್ತಲೇ ಬಂದಿದೆ ಪಾಲ್ಗೊಳ್ಳುತ್ತಲೇ ಇದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಯಾಕೆಂದರೆ ಬಿವಿಎಸ್ ಕಳೆದ 15 ವರ್ಷಗಳಿಂದಲೂ ಇಂತಹ ಆಹಾರದ ಹಕ್ಕನ್ನು ಪ್ರತಿಪಾದಿಸುತ್ತ , ಆಚರಿಸುತ್ತ , ಜಾಗೃತಿ ಮೂಡಿಸುತ್ತ ಬಂದಿದೆ. ಶೋಷಿತ ಬಹುಜನರಿಗೆ ರಾಜಕೀಯ ಅಧಿಕಾರ ಸಿಕ್ಕರೆ ಭೂಮಿ ತಾನಾಗೇ ಸಿಗುತ್ತದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಅದು ಹೊಂದಿದೆ. ಬನ್ನಿ, ಚಲೋ ಉಡುಪಿಯನ್ನು ಬೆಂಬಲಿಸೋಣ , ಅದರಲ್ಲಿ ಭಾಗವಹಿಸೋಣ. ಶೋಷಿತ ಬಹುಜನರ ಮಾನವ ಹಕ್ಕುಗಳನ್ನು ಜಗದೆತ್ತರಕೆ ಕಿರುಚಿ ಹೇಳೋಣ, ಆಹಾರದ ಹಕ್ಕನ್ನು ಉಳಿಸಿಕೊಳ್ಳೋಣ.. ಭೂಮಿಯ ಹಕ್ಕನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯಾಧಿಕಾರದೆಡೆ ಒಗ್ಗೂಡಿ ಸಾಗೋಣ.
ಜೈಭೀಮ್, ಜೈಭಾರತ್.
ರಘೋತ್ತಮ ಹೊಬ







