ಎರಡನೆ ಟೆಸ್ಟ್; ನ್ಯೂಝಿಲೆಂಡ್ ಮೊದಲ ಇನಿಂಗ್ಸ್ 204ಕ್ಕೆ ಆಲೌಟ್, ಭಾರತಕ್ಕೆ 112 ರನ್ ಲೀಡ್

ಕೋಲ್ಕತಾ, ಅ.2: ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ನ್ಯೂಝಿಲೆಂಡ್ ಇಂದು ಮೊದಲ ಇನಿಂಗ್ಸ್ ನಲ್ಲಿ 53 ಓವರ್ ಗಳಲ್ಲಿ 204 ರನ್ ಗಳಿಗೆ ಆಲೌಟಾಗಿದ್ದು, ಭಾರತ 112 ರನ್ ಗಳ ಮುನ್ನಡೆ ಸಾಧಿಸಿದೆ.
ಟೆಸ್ಟ್ ನ ಮೂರನೆ ದಿನವಾಗಿರುವ ಇಂದು ನ್ಯೂಝಿಲೆಂಡ್ ನಿನ್ನೆಯ ಮೊತ್ತಕ್ಕೆ 76 ರನ್ ಸೇರಿಸಿತು. ಎರಡನೆ ದಿನದಾಟದಂತ್ಯಕ್ಕೆ ನ್ಯೂಝಿಲೆಂಡ್ 34 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 128 ರನ್ ಗಳಿಸಿತ್ತು. ಬಿ.ಜೆ. ವಾಟ್ಲಿಂಗ್ 12 ರನ್ ಮತ್ತು ಜೀತನ್ ಪಟೇಲ್ 5 ರನ್ ಗಳಿಸಿ ಔಟಾಗದೆ ಕ್ರೀಸ್ ನಲ್ಲಿದ್ದು. ಅವರು ಬ್ಯಾಟಿಂಗ್ ಮುಂದುವರಿಸಿ ಎಂಟನೆ ವಿಕೆಟ್ ಗೆ 62 ರನ್ ಸೇರಿಸಿದರು.
47 ರನ್ ಗಳಿಸಿದ ಪಟೇಲ್ ಅವರು ಅಶ್ವಿನ್ ಎಸೆತದಲ್ಲಿ ಶಮಿಗೆ ಕ್ಯಾಚ್ ನೀಡಿ ಅರ್ಧ ಶತಕ ವಂಚಿತಗೊಂಡರು. ವಾಟ್ಲಿಂಗ್(25) ಮತ್ತು ವ್ಯಾಗ್ನರ್(10) ಅವರನ್ನು ಮುಹಮ್ಮದ್ ಶಮಿ ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿದರು. ಬೌಲ್ಟ್ ಔಟಾಗದೆ 6 ರನ್ ಗಳಿಸಿದರು.
ಭಾರತದ ಪರ ಭುವನೇಶ್ವರ ಕುಮಾರ್ 48ಕ್ಕೆ 5, ಶಮಿ 70ಕ್ಕೆ 3, ಜಡೇಜ 40ಕ್ಕೆ 1 ಮತ್ತು ಅಶ್ವಿನ್ 33ಕ್ಕೆ 1 ವಿಕೆಟ್ ಹಂಚಿಕೊಂಡರು.





