ಕಾವೇರಿ ವಿಚಾರದಲ್ಲಿ ಎರಡು ದಿನ ಕಾದು ನೋಡಿ ನಿಮಗೆ ಎಲ್ಲವೂ ಪರದೆಯ ಮೇಲೆ ಗೊತ್ತಾಗುತ್ತದೆ : ಡಿವಿಎಸ್

ಬೆಂಗಳೂರು, ಅ.2: ಕಾವೇರಿ ವಿಚಾರದಲ್ಲಿ ಇನ್ನೆರಡು ದಿನ ಕಾದು ನೋಡಿ ಎಲ್ಲವೂ ಪರದೆಯ ಮೇಲೆ ನಿಮಗೆ ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸಂವಿಧಾನತ್ಮಕ ಆದೇಶದ ವಿರುದ್ಧ ಪ್ರಧಾನಿ ಮಧ್ಯಸ್ಥಿಕೆ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಅಸಾಧ್ಯ. ನಾನು ಕಾನೂನು ಸಚಿವನಾಗಿದ್ದಾಗ ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಕಾನೂನು ಇಲಾಖೆಯು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿತ್ತು. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಅಸಾಧ್ಯವೆಂದು ಕೋರ್ಟ್‌ಗೆ ತಾನು ತಿಳಿಸಿರುವುದಾಗಿ ಅವರು ಹೇಳಿದರು.
ಕಾವೇರಿ ವಿಚಾರದಲ್ಲಿ ಆರಂಭದಲ್ಲೇ ರಾಜ್ಯ ಸರಕಾರ ಎಡವಿದೆ. ತಜ್ಞರ ತಂಡ ಕಳುಹಿಸಲು ಹಲವು ಬಾರಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಕೇಂದ್ರ ಸರಕಾರ ಬದ್ಧವಾಗಿದೆ. ಈ ಬಗ್ಗೆ ಯಾರನ್ನೂ ದೂರಲು ಆಗಲ್ಲ. ಒಂದು ಕಡೆ ಕೋರ್ಟ್ ಆದೇಶ ಇನ್ನೊಂದಡೆ ತಮಿಳುನಾಡಿನ ಉದ್ಧಟತನ ನಿಜಕ್ಕೂ ಆಘಾತಕಾರಿ ಎಂದು ಹೇಳಿದರು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ರಾಜ್ಯದ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.





