ಪುತ್ತೂರು: ಗಾಂಧಿಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ

ಪುತ್ತೂರು, ಅ.2: ಮಹಾತ್ಮ ಗಾಂಧೀಜಿ ಅವರ 140ನೆ ಜನ್ಮ ದಿನಾಚರಣೆ ಅಂಗವಾಗಿ ಪುತ್ತೂರಿನ ಗಾಂಧಿಕಟ್ಟೆಯಲ್ಲಿರುವ ಗಾಂಧೀಜಿ ಪ್ರತಿಮೆಗೆ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಪುತ್ತೂರು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಲಾರ್ಪಣೆ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಪೌರಾಯುಕ್ತೆ ರೂಪಾ ಶೆಟ್ಟಿ, ತಹಶೀಲ್ದಾರ್ ಅನಂತ ಶಂಕರ್, ಉಪತಶೀಲ್ದಾರ್ ಶ್ರೀಧರ್ ಪಿ, ಗಾಂಧಿಕಟ್ಟೆ ಸಮಿತಿ ಅಧ್ಯಕ್ಷೆ ರೆ.ವಿಜಯ ಹಾರ್ವಿನ್, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಭಾಸ್ಕರ ಬಾರ್ಯ, ನಯನಾ ರೈ, ಸುಭಾಶ್ ರೈ ಬೆಳ್ಳಿಪ್ಪಾಡಿ, ಸೀತಾರಾಮ ಶೆಟ್ಟಿ, ಜೋಕಿಂ ಡಿ’ಸೋಜ ಮತ್ತಿತರರರು ಉಪಸ್ಥಿತರಿದ್ದರು.
ಸ್ವಾತಂತ್ರ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಅವರು ನಡೆಸಿದ ಜನಸಂಪರ್ಕ ಅಭಿಯಾನದ ಸಂದರ್ಭದಲ್ಲಿ 1943ರಲ್ಲಿ ಗಾಂಧೀಜಿ ಅವರು ಪುತ್ತೂರಿಗೆ ಆಗಮಿಸಿದ್ದರು. ಈ ವೇಳೆ ಗಾಂಧೀಜಿ ಅವರು ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿದ್ದ ಬೃಹತ್ ಅಶ್ವಥ ಮರದ ಅಡಿಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಬಳಿಕ ಇಲ್ಲಿನ ಬೊಟ್ಟತ್ತಾರು(ಬ್ರಹ್ಮನಗರ) ಮತ್ತು ಬಪ್ಪಳಿಗೆ ದಲಿತ ಕಾಲನಿಗಳಿಗೆ ಭೇಟಿ ನೀಡಿದ್ದರು. ಅವರು ವಿಶ್ರಾಂತಿ ಪಡೆದ ಅಶ್ವಥ ವೃಕ್ಷದ ಬಳಿಯಲ್ಲಿ ಗಾಂಧಿಕಟ್ಟೆಯನ್ನು ನಿರ್ಮಿಸಲಾಗಿದ್ದು, ಗಾಂಧಿಕಟ್ಟೆ ಸಮಿತಿ ವತಿಯಿಂದ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿ ಜಯಂತಿಯಂದು ಗಾಂಧೀಜಿ ಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ.







