ಉಳ್ಳಾಲ: ಸಾಮಾಜಿಕ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ

ಉಳ್ಳಾಲ, ಅ.2: ಸೋಮೇಶ್ವರ, ತಲಪಾಡಿ ಮತ್ತು ಕೋಟೆಕಾರ್ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಗಾಂಧಿ ಜಯಂತಿಯಂದು ರವಿವಾರ ಸಾಮಾಜಿಕ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು.
ಉಚ್ಚಿಲ ನಾಗರಿಕ ಯುವವೇದಿಕೆಯ ಅಧ್ಯಕ್ಷ ಪ್ರಮೋದ್ ಉಚ್ಚಿಲ್ ಹಾಗೂ ಕೆ.ಸಿ.ರೋಡು ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಸಂಶುದ್ದೀನ್ ಉಚ್ಚಿಲ್ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಉಚ್ಚಿಲ ರಾ.ಹೆ.ಬಳಿ ಬೆಳಗ್ಗೆ 9 ಗಂಟೆಗೆ ಅನ್ನಾಹಾರ, ನೀರನ್ನೂ ಮುಟ್ಟದೆ ಸತ್ಯಾಗ್ರಹಕ್ಕೆ ಕುಳಿತಿದ್ದು ಸೋಮವಾರ ಬೆಳಗ್ಗೆ 9ಗಂಟೆಗೆ ಸತ್ಯಾಗ್ರಹ ಮುಗಿಸಲಿದ್ದಾರೆ.
ಈ ಸಂದರ್ಭ ಮಾತನಾಡಿದ ಪ್ರಮೋದ್ ಉಚ್ಚಿಲ್, ರಾ.ಹೆ., ಶಾಲೆಯಬಳಿ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಬಿದ್ದರೂ ನಿರ್ವಹಣೆ ನಡೆಸದ ಕಾರಣ ರೋಗಭೀತಿ ಎದುರಾಗಿದೆ. ಮಂಗಳೂರು ಮಾದರಿಯಲ್ಲಿ ಪ್ರತಿದಿನ ತ್ಯಾಜ್ಯ ಸಾಗಾಟ ಇಲ್ಲವೇ ಒಂದಡೆ ಘಟಕ ನಿರ್ಮಿಸಿ ತ್ಯಾಜ್ಯ ವಿಂಗಡಣೆ ಮೂಲಕ ಗೊಬ್ಬರ ತಯಾರಿ ನಡೆಸಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮ ಪಂಚಾಯತ್‌ಗೆ ಮಾಡಿದ ಮನವಿ ಪ್ರಯೋಜನ ನೀಡದ ಹಿನ್ನೆಲೆಯಲ್ಲಿ ನೀರನ್ನೂ ತ್ಯಜಿಸಿ 24 ಗಂಟೆಗಳ ಸತ್ಯಾಗ್ರಹ ನಡೆಸಲಾಗುತ್ತಿದೆ. ಎರಡು ತಿಂಗಳಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಸಂಶುದ್ದೀನ್ ಉಚ್ಚಿಲ್ ಮಾತನಾಡಿ, ಸ್ವಚ್ಛತೆಗಾಗಿ ರ್ಯಾಲಿ ಸಹಿತ ವಿವಿಧ ರೀತಿಯ ಹೋರಾಟ ನಡೆಸಿದ್ದೇವೆ, ಆದರೆ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಭೂಮಿ ಇಲ್ಲ, ಸ್ಥಳೀಯರ ವಿರೋಧವಿದೆ ಎನ್ನುತ್ತಾರೆ. ಜನರಲ್ಲಿ ಈ ಬಗ್ಗೆ ಅರಿವಿಲ್ಲದಿರುವುದರಿಂದ ಜಾಗೃತಿ ಮೂಡಿಸಿ ಘಟಕ ನಿರ್ಮಿಸಿ ಎಂದು ತಿಳಿಸಿದರು.
ಎರಡು ಗ್ರಾಮ ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷರು, ಪ್ರತಿನಿಧಿಗಳು ಪ್ರತಿಭಟನಾನಿರತನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕರವೇ ಜಿಲ್ಲಾಧ್ಯಕ್ಷ ಅನಿಲ್ ದಾಸ್, ದೇವದಾಸ್ ಕೊಲ್ಯ, ಮಧುಸೂದನ ಗೌಡ, ಕೃಷ್ಣ ಉಚ್ಚಿಲ್, ಫಾ.ಡೆನ್ಸಿಲ್ ಲೋಬೋ, ಉಮೇಶ್ ಉಚ್ಚಿಲ್, ತಾಲೂಕು ಪಂಚಾಯತ್ ಸದಸ್ಯೆ ಸುರೇಖ ಚಂದ್ರಹಾಸ್, ಸಿದ್ದೀಕ್ ಕೊಳಂಗೆರೆ, ಆಟೊ ರಿಕ್ಷಾ ಚಾಲಕ-ಮಾಲಕರ ಸಂಘ, ಎಸ್ಸೆಸ್ಸೆಫ್ ಎಸ್‌ವೈಎಸ್, ಸ್ಟೆಲ್ಲಾ ಮೆರೀಸ್, ಕಾರ್ಮೆಲ್ ಮತ್ತು ಭಗವತೀ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವರ್ಗ, ಪೋಷಕರು, ಸಾಮಾಜಿಕ, ಧಾರ್ಮಿಕ ರಾಜಕೀಯ ಮುಖಂಡರು ಭೇಟಿ ನೀಡಿ ಬೆಂಬಲ ಘೋಷಿಸಿದರು.
ಸ್ವಚ್ಛತೆಯನ್ನು ಎಲ್ಲರೂ ಬಯಸುತ್ತಾರೆ
ತ್ಯಾಜ್ಯ ನಿರ್ವಹಣೆಗಾಗಿ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದರೆ ಇನ್ನೊಂದೆಡೆ ಸೋಮೇಶ್ವರ ಗ್ರಾಮ ಪಂಚಾಯತ್‌ಯಲ್ಲಿ ಸುದ್ದಿಗೋಷ್ಟಿ ನಡೆಸಿದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಸ್ವಚ್ಛತೆಯನ್ನು ಎಲ್ಲರೂ ಬಯಸುತ್ತಾರೆ, ಆದರೆ ರಾಜಕೀಯರಹಿತ ಹೋರಾಟ ಎಂದಾದರೆ ಮಂಗಳೂರು ಕ್ಷೇತ್ರದಾದ್ಯಂತ ವಿಸ್ತರಣೆಯಾಗಲಿ. ಯಾಕೆಂದರೆ ಉಳ್ಳಾಲ ನಗರಸಭೆಯಲ್ಲೂ ತ್ಯಾಜ್ಯ ನಿರ್ವಹಣಾ ಘಟಕವಿಲ್ಲ, ಕೊಣಾಜೆ, ಬೆಳ್ಮ ಸಹಿತ ವಿವಿಧ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆಬದಿ ತ್ಯಾಜ್ಯ ರಾಶಿಬಿದ್ದಿದೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಘಟಕ ನಿರ್ಮಾಣಕ್ಕೆ ಒಂದು ಎಕರೆ ಜಮೀನು ನೀಡಲಾಗಿದ್ದರೂ ಯೋಜನೆ ಜಾರಿಗೆ ಬಂದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಉಪಾಧ್ಯಕ್ಷೆ ಸುಶೀಲ ನಾಯ್ಕಿ, ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸುಳ್ಳೆಂಜೇರ್, ಉಪಾಧ್ಯಕ್ಷ ಅನಿಲ್ ಬಗಂಬಿಲ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮೋಹನ್‌ರಾಜ್ ಕನೀರುತೋಟ ಉಪಸ್ಥಿತರಿದ್ದರು.







