ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ, ಸಂಚಾರಿ ವಾರ್ಡನ್ ದಿನಾಚರಣೆ

ಮಂಗಳೂರು,ಅ.2:ಮಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದ ವತಿಯಿಂದ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಇಂದು ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಹಾಗೂ ಸಂಚಾರಿ ವಾರ್ಡನ್ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ್, ಸಂಚಾರ ನಿಯಮವನ್ನು ಸರಿಯಾಗಿ ಪಾಲನೆ ಮಾಡದೇ ಇರುವುದರಿಂದ ಶೇ.99ರಷ್ಟು ಅಪಘಾತಗಳು ನಡೆಯುತ್ತಿದೆ. ಅಪಘಾತದಲ್ಲಿ ಬಸ್ ಚಾಲಕರಷ್ಟೇ ಪ್ರಯಾಣಿಕರ ಪಾತ್ರವೂ ಇದೆ. ಬಸ್ ತಂಗುದಾಣವಿದ್ದರೂ ಕಂಡ ಕಂಡಲ್ಲಿ ಬಸ್‌ಗೆ ಕೈ ತೋರಿಸಿ ನಿಲ್ಲಿಸುವುದನ್ನು ಮೊದಲು ಪ್ರಯಾಣಿಕರು ನಿಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಣಿಪಾಲ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಬಿ.ಎಂ.ಹೆಗ್ಡೆ, ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರಿಂದ ಗೌರವ ಕಡಿಮೆಯಾಗುತ್ತದೆ ಎಂಬ ಕೀಳು ಮನೋಸ್ಥಿತಿ ಹೊಂದಿರುವುದು ರಸ್ತೆ ಅಪಘಾತಗಳು ಹೆಚ್ಚಲು ಕಾರಣ. ಮನುಷ್ಯನ ಅಹಂಕಾರದ ಹೆಚ್ಚಳದಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ ಎಂದರು.
ಹೆಲ್ಮೆಟ್, ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣಿಸುವುದು, ಸೂಚಕ ಫಲಕಗಳನ್ನು ಸರಿಯಾಗಿ ಪಾಲನೆ ಮಾಡದೇ ಮನಸ್ಸು ಬಂದಲ್ಲಿ ಗಾಡಿ ತಿರುಗಿಸಿಕೊಂಡು ಹೋಗಿ ಅಪಘಾತ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ವಾಹನ ಚಾಲಕರು ಸಂಚಾರ ನಿಯಮ ಪಾಲನೆ ಮಾಡಲು ಹೆಚ್ಚು ಗಮನ ನೀಡಬೇಕು ಎಂದರು.
ಟ್ರಾಫಿಕ್ ವಾರ್ಡನ್ ರೋಶನ್ , ಡಿಸಿಪಿ ಸಂಜೀವ್ ಎಂ.ಪಾಟೀಲ್, ಡಿಸಿಪಿ ಶಾಂತರಾಜು, ಹಿರಿಯ ಟ್ರಾಫಿಕ್ ವಾರ್ಡನ್ ಜೆ.ಜೆ. ಗೋನ್ಸಾಲ್ವೆಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







