ರಾಮಕೃಷ್ಣ ಮಿಷನ್ ವತಿಯಿಂದ 3ನೆ ಹಂತದ ಸ್ವಚ್ಛಮಂಗಳೂರು ಅಭಿಯಾನಕ್ಕೆ ಚಾಲನೆ
ಮಂಗಳೂರು, ಅ.2: ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಆಶ್ರಯದಲ್ಲಿ ಮುಂದಿನ 10 ತಿಂಗಳುಗಳ ಕಾಲ ನಡೆಯುವ ‘ಸ್ವಚ್ಛ ಮಂಗಳೂರು’ ಮೂರನೆ ಹಂತದ ಅಭಿಯಾನ ಕಾರ್ಯಕ್ರಮಕ್ಕೆ ಇಂದು ರಾಮಕೃಷ್ಣ ಮಿಷನ್ನಿನ ಮುಖ್ಯ ಕೇಂದ್ರ ಕೋಲ್ಕತ್ತಾದ ಸಹ ಪ್ರಧಾನ ಕಾರ್ಯದರ್ಶಿ ಸ್ವಾಮಿ ಬೋಧಸಾರಾನಂದಜಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಸ್ವಚ್ಛವಾಗುವ ಜೊತೆಗೆ ನಮ್ಮ ಮನಸ್ಸು ಕೂಡಾ ಸ್ವಚ್ಛವಾಗಬೇಕು. ಮನಸ್ಸಿನ ಸ್ವಚ್ಛತೆಯಿಂದ ಪ್ರೀತಿ ಮತ್ತು ಸೌಹಾರ್ದತೆ ನೆಲೆಸುತ್ತದೆ. ಧ್ಯಾನ, ಪ್ರಾರ್ಥನೆಯ ಮೂಲಕ ನಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಇದಕ್ಕಾಗಿ ಸಹನಾ ಮನೋಭಾವ, ಇನ್ನೊಬ್ಬರ ಜನತೆ ಅನುರಾಗ ಹೊಂದುವುದು ಅಗತ್ಯ ಎಂದರು.
ವಿದ್ಯಾರ್ಥಿಗಳು ಎಳವೆಯಲ್ಲಿಯೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಜೀವನಕ್ಕೆ ಪೂರಕವಾದ ಹವ್ಯಾಸಗಳು ಮುಂದೆ ವ್ಯಕ್ತಿಯ ಗುಣಗಳಾಗಿ ಗುರುತಿಸಲ್ಪಡುತ್ತವೆ. ಉತ್ತಮ ಗುಣಗಳು ಉತ್ತಮ ಮನಸ್ಸು ಮತ್ತು ಜೀವನದಲ್ಲಿ ಅದೃಷ್ಟಕ್ಕೆ ಕಾರಣವಾಗುತ್ತವೆ ಎಂದವರು ಹೇಳಿದರು. ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ರಾಮಕೃಷ್ಣ ಮಿಷನ್ನಿನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ, ನಿಟ್ಟೆ ವಿ.ವಿ. ಕುಲಾಧಿಪತಿ ಡಾ.ಎನ್.ವಿನಯ್ ಹೆಗ್ಡೆ, ಮಣಿಪಾಲ ವಿ.ವಿ.ವಿಶ್ರಾಂತ ಕುಲಪತಿ ಡಾ.ಬಿ. ಎಂ ಹೆಗ್ಡೆ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ , ಎಂಆರ್‌ಪಿಎಲ್ ಮುಖ್ಯ ಪ್ರಬಂಧಕ ಪ್ರಸಾದ್ ಹಾಗೂ ಶಾಸಕ ಜೆ.ಆರ್. ಲೋಬೊ ಮುಂತಾದವರು ಉಪಸ್ಥಿತರಿದ್ದರು. ವಿ.ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಪ್ರಾಧ್ಯಾಪಕ ರಾಮ್‌ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಕಳೆದ 2 ಬಾರಿ ಒಂದೇ ತಂಡ ನಗರದ 40 ಬೇರೆ ಬೇರೆ ಸ್ಥಳಗಳಿಗೆ ತೆರಳಿ ಸ್ವಚ್ಛತೆಯ ಕಾರ್ಯ ಕೈಗೊಂಡಿತ್ತು. ಆದರೆ ಈ ಬಾರಿ ನಗರದ ಬೇರೆ ಬೇರೆ ವಾರ್ಡ್‌ಗಳಲ್ಲಿ ಸುಮಾರು 40 ತಂಡಗಳನ್ನು ರೂಪಿಸಲಾಗಿದ್ದು, ಒಟ್ಟು 400 ಸ್ವಚ್ಛತಾ ಕಾರ್ಯಕ್ರಮಗಳನ್ನು ಈ ತಂಡಗಳು ಕೈಗೊಳ್ಳಲಿವೆ. ತಿಂಗಳಿಗೆ ಒಂದು ರವಿವಾರದಂತೆ ಪ್ರತಿ ತಂಡ ವರ್ಷಕ್ಕೆ 10 ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುವ ಗುರಿ ಹೊಂದಲಾಗಿದೆ.







