ಕರ್ನಾಟಕವನ್ನು ಮದ್ಯ, ಅಮಲುಮುಕ್ತ ರಾಜ್ಯವಾಗಿ ಘೋಷಿಸಲು ವೆಲ್ಫೇರ್ ಪಾರ್ಟಿ ಆಗ್ರಹ

ಮಂಗಳೂರು, ಅ.2: ವೆಲ್ಫೇರ್ ಪಾರ್ಟಿಯ ವತಿಯಿಂದ ಮದ್ಯಪಾನ ಮತ್ತು ಅಮಲು ಮುಕ್ತ ಕರ್ನಾಟಕ ಎಂಬ ವಿಚಾರದ ಕುರಿತು ಚಿಂತನಾ ಸಭೆಯು ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ವೆಲ್ಪೇರ್ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಝಾಹೀದ್ ಹುಸೈನ್, ಮದ್ಯಪಾನ ಎಲ್ಲ ಸಾಮಾಜಿಕ ಕೆಡುಕುಗಳ ಕೀಲಿ ಕೈ. ಇಂದು ರಾಜಕೀಯ ಪಕ್ಷಕ್ಕೆ ಮತ್ತು ಸಾರಾಯಿ ಅಥವಾ ಅಮಲು ಪಾನೀಯಗಳಿಗೆ ಪರಸ್ಪರ ಸಂಬಂಧವಿದೆ. ಚುನಾವಣೆ ಸಂದರ್ಭದಲ್ಲಿ ಮದ್ಯವನ್ನು ಹಂಚಿ ದೇಶದ ನಾಗರಿಕರನ್ನು ವಂಚಿಸುತ್ತಿರುವ ಕಾಲ ಘಟ್ಟದಲ್ಲಿ ರಾಜಕೀಯ ಪಕ್ಷವೊಂದು ಮದ್ಯಪಾನ ಮುಕ್ತತೆಗೆ ಕರೆ ನೀಡುವುದು ಆಶಾದಾಯಕ ಬೆಳೆವಣೆಗೆಯಾಗಿದೆ. ಸರಕಾರವು ಗಾಂಧೀಜಿಯ ವಿಚಾರಧಾರೆಯನ್ನು ಗೌರವಿಸುವುದಾದರೆ ರಾಜ್ಯ ಸರಕಾರವು ರಾಜ್ಯವನ್ನು ಅಮಲು ಪಾನೀಯ ಮುಕ್ತವಾಗಿ ಮಾಡಬೇಕು. ದೇಶದಲ್ಲಿ ಅತ್ಯಂತ ಹೆಚ್ಚು ಮದ್ಯ ಸರಬರಾಜಾಗುತ್ತಿದ್ದ ಕೇರಳವು ಇಂದು ಪಾನ ಮುಕ್ತ ರಾಜ್ಯವಾಗಿದೆ. ಸರಕಾರ ಮನಸ್ಸು ಮಾಡಿದ್ದರೆ ಏನನ್ನು ಸಾಧಿಸಬಹುದು ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ವೆಲ್ಫೇರ್ ಪಕ್ಷವು ಮೌಲ್ಯಧಾರಿತ ರಾಜಿಕೀಯ ಸಿದ್ದಾಂತವನ್ನು ಪ್ರಚಾರವನ್ನು ಮಾಡುತ್ತಿದೆ. ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುವ, ಅದಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷ ಮುತ್ತಲಿಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ಫರಾಝ್ ಮತ್ತು ಯೂಸುಫ್ ಪಕ್ಕಲಡ್ಕ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮನ್ಸೂರ್ ಅಹ್ಮದ್
ಮಾಧ್ಯಮ ಕಾರ್ಯದರ್ಶಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ದಕ್ಷಿಣ ಕನ್ನಡ







