ಉಪ್ಪಿನಂಗಡಿ: ಪಿಎಫ್‌ಐ ವತಿಯಿಂದ ‘ದ್ವೇಷ ರಾಜಕೀಯ ನಿಲ್ಲಿಸಿ’ ರಾಷ್ಟ್ರೀಯ ಅಭಿಯಾನ

ಉಪ್ಪಿನಂಗಡಿ, ಅ.2: ದ್ವೇಷ ರಾಜಕೀಯ ನಿಲ್ಲಿಸಿ ‘ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯದ ವತಿಯಿಂದ ಹಳೆ ಬಸ್ ನಿಲ್ದಾಣದ ಬಳಿ ಬೀದಿ ನಾಟಕ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದ ರಿಯಾಝ್ ಫರಂಗಿಪೇಟೆ, ಗೋ ರಕ್ಷಣೆಯ ಹೆಸರಿನಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಅಮಾಯಕ ದಲಿತ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಮೇಲೆ ನಡೆಸುತ್ತಿರುವ ಹಲ್ಲೆಗಳ ಬಗ್ಗೆ ಇಲ್ಲಿನ ಸರಕಾರ ಮೌನ ವಹಿಸಿ ಅವರಿಗೆ ಪರೋಕ್ಷ ಬೆಂಬಲ ನೋಡುತ್ತಿರುವುದು ಕಾಣಬಹುದಾಗಿದೆ. ಜನರಿಗೆ ರಕ್ಷಣೆ ನೀಡಬೇಕಾದ ಪ್ರಧಾನಿಯ ಅಸಹಾಯಕತೆಯ ನಾಟಕ ಜನರು ಅರ್ಥಮಾಡ ತೊಡಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸುವಂತೆ ಹಾಗೂ ಜನತೆ ರಾಜಕಾರಣಿಗಳನ್ನು ಓಟು ಹಾಕಿ ಕಳುಹಿಸಿರುವುದು ದಲಿತರ, ಮುಸ್ಲಿಮರ,ಹಿಂದುಳಿದ ವರ್ಗಗಳ ಮೇಲೆ ದೌರ್ಜನ್ಯ ನಡೆಸಲು ಅಲ್ಲ, ಬದಲಾಗಿ ಹಲ್ಲೆ ನಡೆಸುವ ಫ್ಯಾಸಿಸ್ಟ್ ಶಕ್ತಿಗಳನ್ನು ಮಟ್ಟ ಹಾಕಿ ಸುಭದ್ರ ಇಂಡಿಯಾ ಕಟ್ಟಿ ಬೆಳೆಸಲು ಮಾತ್ರವಾಗಿದೆ. ದ್ವೇಷ ರಾಜಕೀಯ ನಿಲ್ಲಿಸುವುದು ಹೋರಾಟದ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದರು.
ಉಪ್ಪಿನಂಗಡಿ, ಕಡಬ, ನೆಲ್ಯಾಡಿ, ಅತೂರು, ಕರ್ವೇಲು, ಪೆರ್ನೆ ಮುಂತಾದ ಕಡೆಗಳಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಿತು.
ಪಿಎಫ್ಐ ಉಪ್ಪಿನಂಗಡಿ ವಲಯ ಅಧ್ಯಕ್ಷ ಸುಲೈಮಾನ್ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷ ಜಾಫರ್ ಸಾದಿಕ್ ಪೈಝಿ, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ಲಾ ಮದನಿ , ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಇಕ್ಬಾಲ್ ಬಂಗೇರಕಟ್ಟೆ, ವಕೀಲರಾದ ಅಶ್ರಫ್ ಕೆ. ಅಗ್ನಾಡಿ, ನೌಶಾದ್ ಕೆ.ಎಂ., ಅಬ್ದುರ್ರಹ್ಮಾನ್ ಹಾಗೂ ಎಸ್‌ಡಿಪಿಐ ಸ್ಥಳೀಯ ನಾಯಕರಾದ ಅಬ್ದುರ್ರಝಾಕ್ ಸೀಮಾ, ಅಝೀಝ್ ನಿನ್ನಿಕಲ್, ಮುಸ್ತಫಾ ನಿರ್ಮಾ, ಉಮರ್ ಬಂಡಾಡಿ, ಇಕ್ಬಾಲ್ ಕೆಂಪಿ, ಝಕರಿಯಾ ಕೊಡಿಪ್ಪಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಶುಕೂರ್ ಕುಪ್ಪೆಟ್ಟಿ, ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾದ ಮುಸ್ತಫಾ ಜಿ.ಎಂ, ಸಾದಿಕ್ ಅತ್ತಾಜೆ, ರಫೀಕ್ ಕೆ.ಎಂ, ಹಾರಿಸ್ ಕಡಬ, ರವೂಫ್ ಯು.ಟಿ., ಸಿದ್ದೀಕ್ ಮಣ್ಣೆಗುಂಡಿ, ಕರೀಮ್ ವಲಾಲ್, ನವಾಝ್ ಕಟ್ಟೆ, ನವಾಝ್ ಬಂಡಾಡಿ ಮೊದಲಾದವರು ಉಪಸ್ಥಿತರಿದ್ದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಪೆರ್ನೆ ಸ್ವಾಗತಿಸಿ, ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ನೆಲ್ಯಾಡಿ ವಲಯ ಸದಸ್ಯರಾದ ಅಫ್ಪಾನ್ ಕಡಬ ವಂದಿಸಿದರು.







