ಉಜಿರೆ: ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ‘ನ್ಯಾಚುರೋಪತಿ ಡೇ’

ಬೆಳ್ತಂಗಡಿ, ಅ.2: ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನಸ್ಸಿನ ಪರಿಶುದ್ಧತೆ ಜೊತೆಗೆ ಮೌಲ್ಯಯುತವಾದ ಆದರ್ಶ ಬದುಕನ್ನು ರೂಪಿಸುವ ಬಗ್ಗೆ ಆದ್ಯತೆ ಕೊಡಬೇಕು ಎಂದು ಪೊನ್ನಂಪೇಟೆ ರಾಮಕೃಷ್ಣ ಮಠದ ಸ್ವರೂಪಾನಂದ ಸ್ವಾಮೀಜಿ ಹೇಳಿದರು.
ಅವರು, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಗಾಂಧಿ ಜಯಂತಿಯಂದು ಆಚರಿಸಲ್ಪಡುವ ನ್ಯಾಚುರೋಪತಿ ದಿನಾಚರಣೆಯ ಸಂದರ್ಭ ಆಶೀರ್ವಚನ ನೀಡಿದರು.
ವಿದ್ಯಾರ್ಥಿ, ಶಿಕ್ಷಕ ಮತ್ತು ಪೋಷಕ ಇವು ಮೂರು ವಿಧದ ಪ್ರೀತಿಗಳು. ಇವು ತ್ರಿವೇಣಿ ಸಂಗಮವಿದ್ದಂತೆ. ಇಂದು ವಿಜ್ಞಾನ ಮತ್ತು ಧರ್ಮ ಹೇಗಿದೆಯೋ ಹಾಗೆಯೇ ಮಾನವೀಯತೆ ಮತ್ತು ವೈದ್ಯಕೀಯ ಕ್ಷೇತ್ರವೂ ಇರಬೇಕು ಎಂದು ಆಶಿಸಿದರು.
ಅಥಣಿ ಮಠದ ಡಾ.ಪ್ರಭು ಚನ್ನ ಬಸವ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ಜೀವನದ ಆತಂಕಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾಗಿ ಸಾರಂಗ್ ಪಾಟೀಲ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಶಿಷ್ಯೋಪನಯನವೂ ನೆರವೇರಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಜೀವಂಧರ್ ಕುಮಾರ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





