ಮದ್ಯ ನಿಷೇಧಕ್ಕಿಂತ ವ್ಯಸನಿಗಳ ಮನಪರಿವರ್ತನೆ ಮುಖ್ಯ: ಸೊರಕೆ

ಕಾಪು, ಅ.2: ಮದ್ಯಪಾನ ನಿಷೇಧದಿಂದ ಅದರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆಯೇ ಹೊರತು ಸಂಪೂರ್ಣವಾಗಿ ನಿಲ್ಲಿಸಲು ಆಗುವುದಿಲ್ಲ. ಆದುದರಿಂದ ಮದ್ಯ ವ್ಯಸನಿಗಳ ಮನಪರಿವರ್ತನೆ ಮಾಡುವ ಕಾರ್ಯ ಮಾಡಬೇಕು. ಇದರಿಂದ ಹೆಚ್ಚಿನ ಗುರಿ ಸಾಧಿಸಬಹುದಾಗಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.
ಉಡುಪಿ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಶ್ರೀನಾರಾಯಣಗುರು ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ತಾಲೂಕು ಜನಜಾಗೃತಿ ಸಮಾವೇಶದಲ್ಲಿ ನೂತನ ಪದಾಧಿಕಾರಿಗಳ ಪದ ಗ್ರಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಮಾವೇಶವನ್ನು ಉದ್ಘಾಟಿಸಿದ ಕಟಪಾಡಿ ಆನೆಗುಂದಿ ಪೀಠಾಧೀಶ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀವರ್ಚನ ನೀಡಿ, ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಮದ್ಯವ್ಯಸನಿಗಳ ಬದುಕಿನಲ್ಲಿ ಪರಿವರ್ತನೆ ತರುವುದು ಬಹಳ ಪುಣ್ಯದ ಕೆಲಸವಾಗಿದೆ. ಜಾತಿ ಧರ್ಮರಹಿತವಾಗಿ ಮಾಡುವ ಈ ಕಾರ್ಯ ಮಾನವತೆಯ ಸೇವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಉಡುಪಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಕಟಪಾಡಿ ಗ್ರಾಪಂ ಉಪಾಧ್ಯಕ್ಷೆ ಪ್ರಭಾ ಡಿ.ಶೆಟ್ಟಿ, ಕೋಟೆ ಗ್ರಾಪಂ ಅಧ್ಯಕ್ಷೆ ಕೃತಿಕಾ ರಾವ್, ಸಮಿತಿಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ, ಅಖಿಲ ಕರ್ನಾಟಕ ಜನಜಾಗೃತಿಯ ಅಧ್ಯಕ್ಷ ದೇವದಾಸ ಹೆಬ್ಬಾರ್, ಒಕ್ಕೂಟದ ಅಧ್ಯಕ್ಷ ಗಣೇಶ್ ಆಚಾರ್ಯ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಹರೀಶ್ ಶೆಟ್ಟಿ, ಕಾಪು ವಲಯಾಧ್ಯಕ್ಷ ಸತ್ಯೇಂದ್ರ ಪೈ ಉಪಸ್ಥಿತರಿದ್ದರು.
ಯೋಜನೆಯ ಯೋಜನಾಧಿಕಾರಿ ಮಾಲತಿ ದಿನೇಶ್ ಸ್ವಾಗತಿಸಿದರು. ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಾಪು ವಲಯ ಮೇಲ್ವಿಚಾರಕ ಉದಯ ದೇವಾಡಿಗ ವಂದಿಸಿದರು. ಮಣಿಪಾಲ ವಲಯ ಮೇಲ್ವಿಚಾರಕಿ ಉಮಾ ಮತ್ತು ಪಡುಬಿದ್ರಿ ವಲಯ ಮೇಲ್ವಿಚಾರಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಕಟಪಾಡಿ ಪಳ್ಳಿಗುಡ್ಡೆ ಮೈದಾನದಿಂದ ಶ್ರೀವಿಶ್ವನಾಥ ಕ್ಷೇತ್ರದ ವರೆಗೆ ನಡೆದ ಮದ್ಯ ವರ್ಜನ ಜನಜಾಗೃತಿ ಜಾಥಕ್ಕೆ ಕ್ಷೇತ್ರದ ಅಧ್ಯಕ್ಷ ಅಶೋಕ್ ಎಂ.ಸುವರ್ಣ ಚಾಲನೆ ನೀಡಿದರು.







