2020ರ ವೇಳೆಗೆ ಚೀನಾದಲ್ಲಿ ಎಷ್ಟುಮಂದಿ 'ಹಿರಿಯ'ರು ಇರಲಿದ್ದಾರೆ ಗೊತ್ತೇ ?

ಬೀಜಿಂಗ್, ಅ.2: ಮುಂದಿನ 2020ರೊಳಗೆ ಚೀನಾದಲ್ಲಿ 60ರ ಮೇಲು ಹರೆಯದ 24 ಕೋಟಿ ಜನರು ಇರಲಿದ್ದಾರೆ. ಅದು ಅಲ್ಲಿನ ಒಟ್ಟು ಜನಸಂಖ್ಯೆಯ ಶೇ.17ರಷ್ಟಾಗಲಿದೆ. ಇದರಿಂದಾಗಿ ಜಗತ್ತಿನ 2ನೆ ಅತಿ ದೊಡ್ಡ ಆರ್ಥಿಕತೆಯ ದೇಶದಲ್ಲಿ ಆರೋಗ್ಯ ನಿಗಾ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಹಾಗೂ ಕಾರ್ಮಿಕ ಶಕ್ತಿಯ ಕ್ರಮೇಣ ಇಳಿಕೆಯಾಗಲಿದೆ.
ಚೀನದಲ್ಲೀಗ 22 ಕೋಟಿ ಹಿರಿಯ ನಾಗರಿಕರಿದ್ದಾರೆ. 2020ರೊಳಗೆ ಅವರ ಪ್ರಮಾಣ ಶೇ.17ರಷ್ಟು ಏರಿಕೆಯಾಗಿ 24 ಕೋಟಿಗೆ ತಲುಪಲಿದೆಯೆಂದು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಯೋಜನೆ ಆಯೋಗದ ಉಪ ಮುಖ್ಯಸ್ಥ ಲಿಯು ಕ್ವಿಯಾನ್ ಸಮ್ಮೇಳನವೊಂದರಲ್ಲಿ ತಿಳಿಸಿದ್ದಾರೆ.
ಚೀನವು ಸಾಂಕ್ರಾಮಿಕ ರೋಗಗಳ ವಿಚಾರದಲ್ಲಿ ತೀವ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ದೇಶದಲ್ಲಿ 26 ಕೋಟಿಗೂ ಹೆಚ್ಚು ಸಾಂಕ್ರಾಮಿಕ ರೋಗಿಗಳಿದ್ದಾರೆಂದು ಅವರು ಹೇಳಿದ್ದಾರೆ. ಈ ಕಾಯಿಲೆಗಳಿಂದಾಗಿ ಚೀನದಲ್ಲಿ ಶೇ.86ಕ್ಕೂ ಅಧಿಕ ಸಾವುಗಳು ಸಂಭವಿಸುತ್ತಿವೆ.
2015ರಲ್ಲಿ ಚೀನವು ಆರೋಗ್ಯಕ್ಕಾಗಿ ತಲಾ ಅಂದಾಜು 472 ಅಮೆರಿಕನ್ ಡಾಲರ್‌ಗಳನ್ನು ಖರ್ಚು ಮಾಡಿದೆಯೆಂದು ಲಿಯು ತಿಳಿಸಿದ್ದಾರೆ.
ನಿರೀಕ್ಷೆಗೂ ಮೊದಲೇ 60ರ ಮೇಲು ಹರೆಯದವರ ಪ್ರಮಾಣ 22 ಕೋಟಿಗೆ (ಒಟ್ಟು ಜನಸಂಖ್ಯೆಯ ಶೇ.16) ಏರಿರುವ ಹಿನ್ನಲೆಯಲ್ಲಿ ಈ ವರ್ಷದ ಮೇಯಲ್ಲಿ ಚೀನದ ಅಧ್ಯಕ್ಷ ಕ್ಸಿಜಿಂಪಿಂಗ್ ಪರಿಸ್ಥಿತಿ ಪರಾಮರ್ಶಾ ಸಭೆಯೊಂದನ್ನು ನಡೆಸಿದ್ದರು.
ಚೀನದ ರಾಜಧಾನಿಯಲ್ಲಿ ಪಿಂಚಣಿದಾರರ ಪ್ರಮಾಣ ಶೇ.23.4ರಷ್ಟು ಏರಿಕೆಯಾಗಿದೆ (ಒಟ್ಟು ಜನಸಂಖ್ಯೆ 2.2 ಕೋಟಿ).







