ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕಲ್ಪಿಸಲು ಶೀಘ್ರದಲ್ಲಿ ‘ಯೂನಿವರ್ಸಲ್ ಹೆಲ್ತ್‌ಕಾರ್ಡ್’ ಯೋಜನೆ ಜಾರಿ
ಆರೋಗ್ಯ ಸಚಿವ ರಮೇಶ್‌ಕುಮಾರ್
.jpg)
ಬೆಂಗಳೂರು, ಅ.2: ರಾಜ್ಯದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದ ಶೀಘ್ರದಲ್ಲಿಯೇ ಸರಕಾರದಿಂದ ಯೂನಿವರ್ಸಲ್ ಹೆಲ್ತ್ ಕಾರ್ಡ್’ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರು ರಂಗಕಲಾವಿದರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಣವುಳ್ಳವರಿಗೆ ಆರೋಗ್ಯ ಸೇವೆ ಸಿಗುತ್ತಿದ್ದು, ಬಡ, ಮಧ್ಯಮ, ದಲಿತ ಹಾಗೂ ಹಿಂದುಳಿದ ವರ್ಗದ ಜನರು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ, ಬಿಪಿಎಲ್ ಮತ್ತು ಎಪಿಎಲ್ ಎಂದು ವರ್ಗೀಕರಣ ಮಾಡಿ ಸೇವೆ ನೀಡಲಾಗುತ್ತಿದೆ ಯಾದರು, ಬಡವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಉಳ್ಳವರು ಪಡೆಯುತ್ತಿದ್ದಾರೆ. ಹೀಗಾಗಿ ಈ ವ್ಯವಸ್ಥೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೆಲ್ತ್‌ಕಾರ್ಡ್ ಸೇವೆ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಸರಕಾರ ಯಾವುದೇ ಒಂದು ಆದೇಶ ಹೊರಡಿಸಬೇಕಾದರೆ ಅದರ ಹಿಂದೆ ಏನಾದರೂ ಉದ್ದೇಶವಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟವಾದ ಉದ್ದೇಶವಿಲ್ಲದೆ ಸರಕಾರ ಆದೇಶಗಳನ್ನು ಹೊರಡಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಜನರಿಕ್ ಔಷಧಿಗಳನ್ನು ಸರಭರಾಜು ಮಾಡುವ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಆದರೆ, ಕೆಲವು ಡ್ರಗ್ ಮೆಡಿಸನ್ ಕಂಪೆನಿಗಳು ಜನರಿಕ್ ಔಷಧಿಗಳಲ್ಲಿ ಗುಣಮಟ್ಟವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಮುಖಕ್ಕೆ ಬಣ್ಣ ಹಚ್ಚಿದ ತಕ್ಷಣ, ಕಾಲಿಗೆ ಗೆಜ್ಜೆ ಕಟ್ಟಿದ ತಕ್ಷಣ ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲ. ತನ್ನನ್ನು ತಾನು ಅರ್ಪಿಸಿಕೊಂಡು ಪಾತ್ರಕ್ಕೆ ಜೀವ ತುಂಬುವವನು ಮಾತ್ರ ಕಲಾವಿದನಾಗುತ್ತಾನೆ.
ತನ್ನ ಎಲ್ಲ ನೋವು-ನಲಿವುಗಳನ್ನು ಮರೆತು ಕಲಾ ಅಭಿಮಾನಿಗಳನ್ನು ರಂಜಿಸು ಶಕ್ತಿ ಇರುವುದು ರಂಗಭೂಮಿಯಲ್ಲಿ ನಟಿಸುವ ಕಲಾವಿದನಿಗೆ ಮಾತ್ರ. ಪ್ರಪಂಚದಲ್ಲಿ ಯಾವುದೇ ಒಂದು ಕ್ರಾಂತಿ ನಡೆಯಲು ಮೂಲ ಕಾರಣ ರಂಗಭೂಮಿ ಎಂದ ಅವರು ಕಲಾವಿದರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಟಿ.ಎನ್.ಸೀತಾರಾಮ್, ಕಿದ್ವಾಯಿ ಸ್ಮಾರಕ ಗ್ರಂಥಿಯ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ, ಕರ್ನಾಟಕ ಮೂರ್ಚೆರೋಗ ನಿವಾರಣಾ ಸೇವಾ ಸಂಸ್ಥೆಯ ಡಾ.ಜಿ.ಟಿ.ಸುಭಾಷ್, ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಕಲಾವಿದರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಶಶಿಧರ ಅಡಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ಉಪಸ್ಥಿತರಿದ್ದರು.







