‘ಗಾಂಧಿ ಧಿಕ್ಕಾರ ದಿನ’ವಾಗಿ ಆಚರಣೆ : ಗಾಂಧೀಜಯಂತಿಯಂದು ಗೋಡ್ಸೆ ಪ್ರತಿಮೆ ಅನಾವರಣ

ಮೀರತ್, ಅ.2: ಮಹಾತ್ಮಾ ಗಾಂಧೀಜಿಯವರ ಜನ್ಮದಿನಾಚರಣೆ ಸಂದರ್ಭದಲ್ಲಿ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಅನಾವರಣಗೊಳಿಸಿರುವ ಘಟನೆ ನಡೆದಿದೆ.
ಮೀರತ್‌ನ ಶಾರದಾ ರಸ್ತೆಯಲ್ಲಿರುವ ಅಖಿಲ ಭಾರತೀಯ ಹಿಂದೂ ಮಹಾಸಭೆಯ ಕಚೇರಿಯಲ್ಲಿ ಗಾಂಧಿ ಜಯಂತಿಯನ್ನು ‘ಧಿಕ್ಕಾರ ದಿನ ’ ವನ್ನಾಗಿ ಆಚರಿಸಲಾಯಿತು ಮತ್ತು ದೇಶದಲ್ಲೇ ಪ್ರಪ್ರಥಮವಾಗಿ ಗೋಡ್ಸೆಯ ಪ್ರತಿಮೆಯನ್ನು ಇಲ್ಲಿ ಅನಾವರಣಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮ, 2014ರಲ್ಲಿ ಗೋಡ್ಸೆ ಪ್ರತಿಮೆ ಅನಾವರಣಕ್ಕೆ ಮುಂದಾದಾಗ ಪೊಲೀಸರು ಮತ್ತು ಬಲಪಂಥೀಯರು ತಡೆಯೊಡ್ಡಿದ್ದರು. ಆ ಬಳಿಕ ಸ್ಥಳಕ್ಕೆ ಬೀಗಮುದ್ರೆ ಹಾಕಲಾಗಿತ್ತು. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಬಾರಿ ನಾವು ಎಚ್ಚರಿಕೆಯಿಂದ ಮುಂದಡಿ ಇಟ್ಟು ಗಾಂಧಿ ಜಯಂತಿಯಂದು ಗೋಡ್ಸೆ ಪ್ರತಿಮೆ ಅನಾವರಣ ಮಾಡಿದ್ದೇವೆ. ಈ ಕಾರ್ಯಕ್ಕೆ ಇದಕ್ಕಿಂತ ಪ್ರಶಸ್ತವಾದ ದಿನ ಬೇರೊಂದಿಲ್ಲ. ಎಲ್ಲಾ ಭಾರತೀಯರು ಗಾಂಧಿಯ ದಾರಿಯಲ್ಲಿ ಸಾಗುವುದನ್ನು ಬಿಟ್ಟು ಗೋಡ್ಸೆಯ ಆರಾಧನೆಯಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ನಮ್ಮ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಜೈಪುರದ ಶಿಲ್ಪಿಗಳು ನಿರ್ಮಿಸಿರುವ ಗೋಡ್ಸೆಯ ಕಲ್ಲಿನ ಪ್ರತಿಮೆ 2 ಅಡಿ ಎತ್ತರ, 2 ಅಡಿ ಅಗಲವಿದ್ದು 50 ಕಿಲೋ ತೂಕವಿದೆ. ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಅದಕ್ಕೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಲಾಯಿತು. ಈ ಪ್ರತಿಮೆ ತಯಾರಿಸಲು 45 ಸಾವಿರ ರೂ.ವೆಚ್ಚವಾಗಿದ್ದು ಇದೊಂದು ಶ್ರೇಷ್ಠ ಕೆಲಸವಾದ ಕಾರಣ ಈ ಮೊತ್ತವನ್ನು ತಾನೇ ಪಾವತಿಸಿದ್ದೇನೆ ಎಂದು ಸಂಘಟನೆಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಯೋಗೇಂದ್ರ ವರ್ಮ ತಿಳಿಸಿದ್ದಾರೆ.





