ಈ ಬಾರಿ ಗಣರಾಜ್ಯೋತ್ಸವಕ್ಕೆ ಭಾರತದ ಮುಖ್ಯ ಅತಿಥಿ ಗಲ್ಫ್ ದೇಶದ ಈ ನಾಯಕ
.jpg&MaxW=780&imageVersion=16by9&NCS_modified=20161002193501.jpeg)
ಅಬುಧಾಬಿ,ಅ.2: ಅಬುಧಾಬಿಯ ಯುವರಾಜ ಹಾಗೂ ಯುಎಇನ ಸಶಸ್ತ್ರ ಪಡೆಗಳ ಪರಮೋನ್ನತ ಕಮಾಂಡರ್ ಶೇಕ್‌ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಹೊಸದಿಲ್ಲಿಯಲ್ಲಿ ನಡೆಯಲಿರುವ 2017ರ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಭಾರತ ಸರಕಾರ ಆಹ್ವಾನ ನೀಡಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ಝಾಯೆದ್ ಅಲ್ ನಹ್ಯಾನ್ ಅವರಿಗೆ ಟ್ವೀಟರ್ ಮೂಲಕ ಕಳುಹಿಸಿದ ಸಂದೇಶವೊಂದರಲ್ಲಿ ಭಾರತದ 68ನೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ.
ಶೇಕ್ ಮುಹಮ್ಮದ್ ಅವರ ಅಧಿಕೃತ ಟ್ವಿಟರ್ ಖಾತೆಯ ನಿರ್ವಹಣಾ ವಿಭಾಗವು ಈ ಸುದ್ದಿಯನ್ನು ದೃಢಪಡಿಸಿದೆ ಹಾಗೂ ಅಬುಧಾಬಿಯ ಯುವರಾಜ, ಭಾರತದ ಆಹ್ವಾನವನ್ನು ಸ್ವೀಕರಿಸಿರುವುದಾಗಿ ಅದು ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದೆ. ಭಾರತ ಹಾಗೂ ಯುಎಇನ ಬಾಂಧವ್ಯವು ಇತಿಹಾಸದಲ್ಲಿ ಆಳವಾಗಿ ಬೇರೂರಿದೆ ಮತ್ತು ಉಭಯದೇಶಗಳ ನಡುವೆ ವ್ಯೆಹಾತ್ಮಕ ಸಹಕಾರ ಕೂಡಾ ವೃದ್ಧಿಸಿದೆಯೆಂದು ಅದು ಹೇಳಿದೆ.
2006ರಲ್ಲಿ ಆಗಿನ ಸೌದಿ ಅರೇಬಿಯದ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರ ಬಳಿಕ ಶೇಕ್ ಮುಹಮ್ಮದ್ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ಗಲ್ಫ್ ಪ್ರಾಂತದ ಪ್ರಪ್ರಥಮ ನಾಯಕರಾಗಿದ್ದಾರೆ.
2014ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಕಳೆದ ವರ್ಷ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲೆಂಡ್ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 1950ರಲ್ಲಿ ನಡೆದ ಮೊದಲ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಿನ ಇಂಡೊನೇಶ್ಯದ ಅಧ್ಯಕ್ಷ ಡಾ.ಸುಕಾರ್ನೊ ಮುಖ್ಯ ಅತಿಥಿಯಾಗಿದ್ದರು.





