ಭಟ್ಕಳ: ಬಾಕಡಕೇರಿಯಲ್ಲಿ ಶಾಂತಿ ಮತ್ತು ಮಾನವೀಯತೆ ಕಾರ್ಯಕ್ರಮ

ಭಟ್ಕಳ, ಅ.2: ಶಾಂತಿ ಮತ್ತು ಮಾನವೀಯತೆ ಅಭಿಯಾನದ ಅಂಗವಾಗಿ ತಾಲೂಕಿನ ಚಿತ್ರಾಪುರದ ಬಾಕಡಕೇರಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ವತಿಯಿಂದ ಸಭಾಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ, ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಆರ್. ಮಾನ್ವಿ, ಹುಟ್ಟು, ಭಾಷೆ, ಸಂಸ್ಕೃತಿಯ ಆಧಾರದಲ್ಲಿ ಯಾರು ಮೇಲು ಕೀಳಲ್ಲ. ನಾವೆಲ್ಲರು ಓರ್ವ ಸ್ತ್ರೀಪುರಷನಿಂದ ಸೃಷ್ವಿಸಲ್ಪಟ್ಟಿದ್ದೇವೆ. ಯಾರು ದೇವನಿಗೆ ಭಯಪಟ್ಟು ಬದುಕುತ್ತಾನೋ ಅವನೇ ನಮ್ಮಲ್ಲಿ ಶ್ರೇಷ್ಠ ಎಂದರು.
ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯವು ಶತ ಶತಮಾನಗಳಿಂದ ತುಳಿತಕ್ಕೊಳಗಾಗಿದೆ. ಶಿಕ್ಷಣ, ಉದ್ಯೋಗ, ಆಹಾರ, ವಸತಿ ಸಮಸ್ಯೆಯನ್ನು ಎದುರಿಸುತ್ತಿದ್ದು ನಾವು ನಮ್ಮ ಹಕ್ಕುಗಳಿಗಾಗಿ ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದ ಅವರು, ನಾವು ಮನುಷ್ಯರೆಂಬ ನೆಲೆಯಲ್ಲಿ ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಷಡ್ಯಂತ್ರಗಳಿಗೆ ಒಳಗಾಗದೆ ವಿಷಯವನ್ನು ವಿಮರ್ಶಿಸಬೇಕು. ನಾವಿಂದು ರಾಜಕೀಯ ದಾಳಕ್ಕೆ ಬಲಿಯಾಗುತ್ತಿದ್ದೇವೆ. ನಮ್ಮನ್ನು ಆಹಾರ, ಉಡುಗೆ, ತೊಡುಗೆ ಸಂಸ್ಕೃತಿಯ ಹೆಸರಲ್ಲಿ ಬೇರ್ಪಡಿಸುವ, ನಮ್ಮಲ್ಲಿ ಅಪನಂಬಿಕೆ, ಅನುಮಾನಗಳನ್ನು ಹುಟ್ಟುಹಾಕುವ ನಿರಂತರ ಪ್ರಯತ್ನಗಳು ನಡೆಯುತ್ತಿದ್ದು ಇದಕ್ಕೆ ನಾವು ಕಿವಿಗೊಡದೆ ನಮ್ಮ ನಮ್ಮಲ್ಲಿನ ಭಿನ್ನತೆಗಳನ್ನು ಬದಿಗೊತ್ತಿ ದೇಶವನ್ನು ಕಟ್ಟುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಶೋಕ ಬಾಕಡ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಾಬಾ ಸಾಹೀಬ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಾದೇವ್ ಬಾಕಡ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ವಂದಿಸಿದರು.
ಅಭಿಯಾನದ ಸಂಚಾಲಕ ಯೂನೂಸ್ ರುಕ್ನುದ್ದೀನ್, ಸೈಯದ್ ಅಶ್ರಫ್ ಬರ್ಮಾವರ್, ಮೌಲಾನ ಸೈಯ್ಯದ್ ಝುಬೈರ್, ಮೌಲಾನ ಝೀಯಾವುರ್ರಹ್ಮಾನ್ ನದ್ವಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







