ನಿಸ್ವಾರ್ಥ ಸೇವೆಯಿಂದ ಸಮಾಜದ ಅಭಿವೃದ್ಧಿ: ಚಂದ್ರಹಾಸ್
ನಡುಪದವು: ರಕ್ತದಾನ, ನೇತ್ರ ಚಿಕಿತ್ಸಾ ಶಿಬಿರ,,

ಕೊಣಾಜೆ, ಅ.2: ಸಮಾಜದಲ್ಲಿ ನಾವು ಬದುಕುವುದು ಮಾತ್ರವಲ್ಲ ಉಳಿದವರಿಗೂ ಉತ್ತಮ ಬದುಕನ್ನು ಕಟ್ಟಿಕೊಡುವ ನಿಸ್ವಾರ್ಥ ಮನೋಭಾವ ನಮ್ಮದಾಗಬೇಕು. ನಿಸ್ವಾರ್ಥ ಸೇವೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ರಕ್ತದಾನ ಮಹೋನ್ನತ ಕಾರ್ಯದಿಂದ ಅದೆಷ್ಟೋ ಜನರಿಗೆ ಬದುಕನ್ನು ಕಟ್ಟಿಕೊಡುವ ಪುಣ್ಯವಿದೆ. ಇಂತಹ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಇರಾ ಅಭಿಪ್ರಾಯಪಟ್ಟರು.
ರವಿವಾರ ನಡುಪದವಿನ ಪಿ.ಎ. ಕಾಲೇಜು ಆವರಣದಲ್ಲಿ ಪಟ್ಟೋರಿ ನಡುಪದವಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಎಸ್ಕೆಎಸ್ಸೆಸ್ಸೆಫ್ ಇದರ ಆಶ್ರಯದಲ್ಲಿ ಯೆನೆಪೊಯ ಮೆಡಿಕಲ್ ಕಾಲೇಜು, ಪಿ.ಎ. ಎಜುಕೇಶನ್ ಟ್ರಸ್ಟ್, ಯು.ಟಿ.ಫರೀದ್ ಫೌಂಡೇಶನ್, ಪ್ರಸಾದ್ ನೇತ್ರಾಲಯ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಇದರ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನ, ಬಡವರ ಸೇವೆ ಇವೆಲ್ಲವೂ ಸಮಾಜದಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಬದುಕಲು ಅವಕಾಶ ಒದಗಿಸಿಕೊಡುತ್ತದೆ. ಯುವ ಸಂಘಟನೆಗಳು ಇಂತಹ ಸಮಾಜಿಕ ಸೇವೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಜಿ ಇಬ್ರಾಹೀಂ ನಡುಪದವು, ಸಮಾಜದಲ್ಲಿ ಶಾಂತಿ ಸಾಮರಸ್ಯದೊಂದಿಗೆ ಸಮಾಜಸೇವೆಯ ಮಹತ್ವವನ್ನು ಅರಿತುಕೊಂಡು ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ದೇರಳಕಟ್ಟೆ ವಲಯ ಮದ್ರಸ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಮೊಯ್ದಿನ್ ಹಾಜಿ ಮರಾಠಿ ಮೂಲೆ, ನಡುಪದವು ಜುಮಾ ಮಸೀದಿಯ ಅಧ್ಯಕ್ಷ ಪಿ.ಎಂ.ಕುಂಞಿ, ಪಟ್ಟೋರಿ ಜುಮಾ ಮಸೀದಿಯ ಅಧ್ಯಕ್ಷ ಸೂಫಿ ಕುಂಞಿ ಹಾಜಿ, ಉದ್ಯಮಿ ಎ.ಎಚ್.ಖಾದರ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ವಲಯಾಧ್ಯಕ್ಷ ಇಬ್ರಾಹೀಂ, ಯುವಕಾಂಗ್ರೆಸ್‌ನ ನಝರ್ ಷಾ ಪಟ್ಟೋರಿ, ಸುಲೈಮಾನ್ ಹಾಜಿ ನಡುಪದವು, ಪುತ್ತು ಉಸ್ತಾದ್ ನಡುಪದವು, ದಸ್ತಾವೇಜು ಬರಹಗಾರ ಸದಾಶಿವಯ್ಯ, ಮೊಯ್ದಿನ್ ಕುಂಞಿ ಮೂಲೆ, ಉದ್ಯಮಿ ನಾಸಿರ್ ಕೆ.ಕೆ., ಬ್ರೈಟ್ ಶಿಕ್ಷಣ ಸಂಸ್ಥೆಯ ಜಲೀಲ್ ಮೋಂಟುಗೋಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶೈಖುನಾ ಅಲ್‌ಹಾಜ್ ಎಂ.ಪಿ.ಮುಹಮ್ಮದ್ ಮುಸ್ಲಿಯಾರ್ ಪಟ್ಟೋರಿ ದುಆ ನೆರವೇರಿಸಿದರು.
ಸಿ.ಎಂ.ಶರೀಫ್ ಚೆಂಬೆತೋಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್.ನಾಸಿರ್ ನಡುಪದವು ವಂದಿಸಿದರು.





