ಬಾರಾಮುಲ್ಲಾದ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರ ಹತ್ಯೆ; ಓರ್ವ ಯೋಧ ಹುತಾತ್ಮ
ಮತ್ತೆ ಭಯೋತ್ಪಾದಕರ ಅಟ್ಟಹಾಸ

ಶ್ರೀನಗರ,ಅ.2: 18 ಯೋಧರನ್ನು ಬಲಿ ತೆಗೆದುಕೊಂಡ ಉರಿ ಸೇನಾ ನೆಲೆಯ ಮೇಲಿನ ಭಯೋತ್ಪಾದಕ ದಾಳಿಯ ನೆನಪು ಇನ್ನೂ ಹಸಿರಾಗಿರುವಾಗಲೇ ಪಾಕ್ ಮೂಲದ ನಾಲ್ವರು ಉಗ್ರರು ರವಿವಾರ ಮತ್ತೊಮ್ಮೆ ಅಟ್ಟಹಾಸವನ್ನು ಮೆರೆದಿದ್ದಾರೆ. ಶಿಬಿರದ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಕೊಂದು ಹಾಕಿದೆ. ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್‌ನ ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ಮೂಲಗಳು ತಿಳಿಸಿವೆ.
ರಾತ್ರಿ 10:30ರ ಸುಮಾರಿಗೆ ರಾಜ್ಯ ರಾಜಧಾನಿ ಶ್ರೀನಗರದಿಂದ 50 ಕಿ.ಮೀ.ದೂರದಲ್ಲಿರುವ ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿರುವ 46 ರಾಷ್ಟ್ರೀಯ ರೈಫಲ್ಸ್ ಶಿಬಿರದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದ್ದಾರೆ. ಭಾರತೀಯ ಯೋಧರು ಪ್ರತಿದಾಳಿಯನ್ನು ಕೈಗೊಂಡಿದ್ದು, ಭೀಕರ ಗುಂಡಿನ ಕಾಳಗ ನಡೆಯುತ್ತಿದೆ.
ನಾಲ್ವರು ಉಗ್ರರು ದಾಳಿ ನಡೆಸಿದ್ದಾರೆಂದು ಹೇಳಲಾಗಿದ್ದು, ಇನ್ನಿಬ್ಬರು ಉಗ್ರರಿಗಾಗಿ ಶೋಧ ಮುಂದುವರಿದಿದೆ. ಸೇನೆಯ ಇಬ್ಬರು ಮತ್ತು ಬಿಎಸ್‌ಎಫ್‌ನ ಮೂವರು ಯೋಧರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಬಾರಾಮುಲ್ಲಾ ಹಳೆಯ ಪಟ್ಟಣದ ಜಾನಬಾಜ್‌ಪೋರಾದಲ್ಲಿರುವ ಸೇನಾ ಶಿಬಿರಕ್ಕೆ ನುಗ್ಗಿದ ಭಯೋತ್ಪಾದಕರು ಮೊದಲು ಗ್ರೆನೇಡ್‌ಗಳಿಂದ ದಾಳಿ ನಡೆಸಿ ಬಳಿಕ ಗುಂಡಿನ ಮಳೆಗೆರದಿದ್ದಾರೆ. ತಕ್ಷಣ ಭಾರತೀಯ ಯೋಧರು ಪ್ರತಿದಾಳಿಯನ್ನಾರಂಭಿಸಿದ್ದಾರೆ.
ಗಡಿಯಿಂದ 10 ಕಿ.ಮೀ.ಅಂತರದೊಳಗಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು,ಅಖನೂರು ಸೆಕ್ಟರ್‌ನಲ್ಲಿಯ ಗ್ರಾಮಗಳು ಹೆಚ್ಚುಕಡಿಮೆ ಖಾಲಿ ಯಾಗಿವೆ. ನಾಲ್ವರು ಉಗ್ರರು ಸೇನಾ ಶಿಬಿರದಲ್ಲಿ ನುಗ್ಗಿದ್ದಾರೆ ಎನ್ನಲಾಗಿದೆ.
ಸೇನಾ ಶಿಬಿರದ ಬಳಿ ಭಾರೀ ಗುಂಡಿನ ಕಾಳಗ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಯಾವ ಭಯೋತ್ಪಾದಕ ಗುಂಪು ಈ ದಾಳಿಯನ್ನು ನಡೆಸಿದೆ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಮೂರು ದಿನಗಳ ಹಿಂದಷ್ಟೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ ಅಲ್ಲಿಯ ಭಯೋತ್ಪಾದಕರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದ ಭಾರತೀಯ ಸೇನೆಯು ಗಡಿಯೊಳಗೆ ನಸುಳಲು ಹೊಂಚು ಹಾಕಿದ್ದ 38 ಭಯೋತ್ಪಾದ ಕರನ್ನು ಹತ್ಯೆಗೈದಿತ್ತು.
ಇಂದಿನ ಭಯೋತ್ಪಾದಕ ದಾಳಿಗೆ ಮುನ್ನ ಪಾಕ್ ಪಡೆಗಳು ಜಮ್ಮು ಜಿಲ್ಲೆಯ ಪಲ್ಲನ್‌ವಾಲಾ ವಿಭಾಗದಲ್ಲಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ಠಾಣೆಗಳು ಮತ್ತು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿಗಳನ್ನು ನಡೆಸಿದ್ದವು.







