ಭಾರತದ ವಿನ್ಯಾಸಕ್ಕೆ ಪಾಕಿಸ್ತಾನ ಆಕ್ಷೇಪ
ಕಿಶನ್‌ಗಂಗಾ ಜಲವಿದ್ಯುತ್ ಯೋಜನೆ
ಹೊಸದಿಲ್ಲಿ, ಅ.3: ಭಾರತದ ಕಿಶನ್‌ಗಂಗಾ ಜಲವಿದ್ಯುತ್ ಯೋಜನೆಯ ಕುರಿತಾಗಿ ತನ್ನ ಆಕ್ಷೇಪವನ್ನು ಆಲಿಸಲು ಮಧ್ಯಸ್ಥಿಕೆ ನ್ಯಾಯಾಲಯವೊಂದನ್ನು ರಚಿಸುವಂತೆ ಪಾಕಿಸ್ತಾನವು ವಿಶ್ವಬ್ಯಾಂಕನ್ನು ಆಗ್ರಹಿಸಿದೆ. ಅದೇ ವೇಳೆ ಭಾರತವು ವಿವಾದ ಪರಿಹಾರಕ್ಕೆ ತಟಸ್ಥ ಪರಿಣತನೊಬ್ಬನನ್ನು ನೇಮಿಸುವಂತೆ ವಿಶ್ವಬ್ಯಾಂಕನ್ನು ಕೇಳಿಕೊಂಡಿದೆ.
ಜಮ್ಮು-ಕಾಶ್ಮೀರದಲ್ಲಿ ನಿರ್ಮಿಸಲಾಗುವ ಈ ಜಲ ವಿದ್ಯುತ್ ಯೋಜನೆಯ ವಿನ್ಯಾಸದ ಬಗ್ಗೆ ಪಾಕಿಸ್ತಾನವು ಆಕ್ಷೇಪವೆತ್ತಿದೆ. ಅದು ಉಭಯ ದೇಶಗಳ ನಡುವಣ ಸಿಂಧೂ ಜಲ ಒಪ್ಪಂದದ ಮಾನದಂಡಕ್ಕೆ ಅನುಗುಣವಾಗಿಲ್ಲವೆಂದು ಪಾಕಿಸ್ತಾನ ಆರೋಪಿಸಿದೆ.
ಆದಾಗ್ಯೂ, ಯೋಜನೆಯು ಒಪ್ಪಂದದ ಮಾನದಂಡಕ್ಕನುಸಾರವಾಗಿಯೇ ಇದೆಯೆಂದು ಭಾರತ ಒತ್ತಿ ಹೇಳಿದೆ. ಒಪ್ಪಂದದಲ್ಲಿ ಸೂಚಿಸಲಾಗಿರುವಂತೆ ಇದೊಂದು ‘ತಾಂತ್ರಿಕ ವಿಚಾರದ’ ವಿವಾದವಾಗಿರುವುದರಿಂದ ತಟಸ್ಥ ಪರಿಣತನೊಬ್ಬನನ್ನು ನೇಮಿಸುವಂತೆ ಅದು ವಿಶ್ವಬ್ಯಾಂಕ್‌ಗೆ ಮನವಿ ಮಾಡಿದೆ. ಪಾಕಿಸ್ತಾನವು ಮಧ್ಯಸ್ಥಿಕೆ ನ್ಯಾಯಾಲಯವನ್ನು ರಚಿಸುವಂತೆ ವಿಶ್ವ ಬ್ಯಾಂಕನ್ನು ವಿನಂತಿಸಿದ್ದರೆ, ತಟಸ್ಥ ಪರಿಣತನೊಬ್ಬನನ್ನು ನೇಮಿಸುವಂತೆ ಭಾರತ ಮನವಿ ಮಾಡಿದೆ. ಒಪ್ಪಂದವೂ ಅದನ್ನೇ ಹೇಳುತ್ತಿದೆ. ಈ ವಿಷಯವನ್ನು ಕಾನೂನು ಪರಿಣತನೊಬ್ಬನಿಗಿಂತ ಚೆನ್ನಾಗಿ ಒಬ್ಬ ಇಂಜಿನಿಯರ್‌ನಂತಹ ತಾಂತ್ರಿಕ ಪರಿಣತ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲನೆಂದು ಮೂಲಗಳು ಹೇಳಿವೆ.
ಭಾರತ ಹಾಗೂ ಪಾಕಿಸ್ತಾನ ಯೋಜನೆಗೆ ಸಂಬಂಧಿಸಿ ತಮ್ಮ ತಮ್ಮ ಅಂಶಗಳನ್ನು ಸೆ.27 ರಂದು ವಾಶಿಂಗ್ಟನ್‌ನಲ್ಲಿ ವಿಶ್ವಬ್ಯಾಂಕ್‌ಗೆ ಪ್ರತ್ಯೇಕವಾಗಿ ಸಲ್ಲಿಸಿವೆ.
ಪಾಕಿಸ್ತಾನವು ನದಿಯ ಕೆಳಭಾಗ ದಲ್ಲಿರುವುದರಿಂದ ಭಾರತದ ಯೋಜನೆಯ ವಿನ್ಯಾಸದಿಂದ ತನಗೆ ನೀರು ಹರಿಯಲು ಅಡಚಣೆಯಾಗಬಹುದೆಂಬುದು ಅದರ ಭೀತಿಯಾಗಿದೆ.







