ಜಯಾ ಆರೋಗ್ಯ ಸ್ಥಿತಿಯ ವಿವರ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ
ಚೆನ್ನೈ, ಅ.3: ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾರ ಆರೋಗ್ಯ ಸ್ಥಿತಿಯ ಕುರಿತು ರಾಜ್ಯ ಸರಕಾರದಿಂದ ವಿವರವಾದ ವರದಿ ಹಾಗೂ ಅವರು ತಾನಿರುವ ಆಸ್ಪತ್ರೆಯಲ್ಲಿ ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ್ದಾರೆನ್ನಲಾಗಿರುವ ಸಭೆಯ ಭಾವಚಿತ್ರ ಬಿಡುಗಡೆಗೆ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಮದ್ರಾಸ್ ಹೈಕೋರ್ಟ್‌ನಲ್ಲಿ ದಾಖಲಾಗಿದೆ. ತಮಿಳುನಾಡಿನ ಜನರು ಜಯಲಲಿತಾರ ಆರೋಗ್ಯ ಸ್ಥಿತಿಯನ್ನು ತಿಳಿಯಲು ಕಾತರರಾಗಿದ್ದಾರೆಂದು ಅರ್ಜಿದಾರ, ಸಮಾಜ ಕಾರ್ಯಕರ್ತ ‘ಟ್ರಾಫಿಕ್’ ರಾಮಸ್ವಾಮಿ ವಾದಿಸಿದ್ದಾರೆ. ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಹಾಗೂ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆಂಬ ವರದಿಗಳನ್ನು ಉಲ್ಲೇಖಿಸಿರುವ ರಾಮಸ್ವಾಮಿ, ಅವರು ಜಯಾರ ಆರೋಗ್ಯ ಸ್ಥಿತಿಯ ವಿವರ ನೀಡಿಲ್ಲ ಎಂದಿದ್ದಾರೆ. ಅರ್ಜಿಯು ಮಂಗಳವಾರ ವಿಚಾರಣೆಗೆ ಬರುವ ನಿರೀಕ್ಷೆಯಿದೆ.
Next Story





