ಪಾರಿಕ್ಕರ್‌ಗೆ ಸನ್ಮಾನ ರದ್ದು
ಬಾರಾಮುಲ್ಲಾ ದಾಳಿಯ ಹಿನ್ನೆಲೆ
ಪಣಜಿ, ಅ.3: ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನಾ ಶಿಬಿರಗಳ ಮೇಲೆ ರವಿವಾರ ರಾತ್ರಿ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿ ಆಯೋಜಿಸ ಲಾಗಿದ್ದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್‌ರ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಗೋವಾ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿನಯ ತೆಂಡುಲ್ಕರ್ ಇಂದಿಲ್ಲಿ ತಿಳಿಸಿದ್ದಾರೆ.
ಪಾರಿಕ್ಕರ್‌ರ ಕೋರಿಕೆಯ ಮೇರೆಗೆ ಈ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ದಾಳಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ನಡೆಸದಿರಲು ಬಿಜೆಪಿ ಸ್ಥಳೀಯ ಘಟಕವೂ ಕಳೆದ ರಾತ್ರಿ ನಿರ್ಧರಿಸಿತ್ತು ಎಂದವರು ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಯಶಸ್ವಿ ಸರ್ಜಿಕಲ್ ದಾಳಿಗಾಗಿ ರಾಜ್ಯ ಬಿಜೆಪಿಯು ಅ.4ರಂದು ಇಲ್ಲಿಯ ಆಝಾದ್ ಮೈದಾನದಲ್ಲಿ ಪಾರಿಕ್ಕರ್‌ಗೆ ಸಾರ್ವಜನಿಕ ಸನ್ಮಾನವನ್ನು ಹಮ್ಮಿಕೊಂಡಿತ್ತು. ದಾಬೋಲಿಂ ವಿಮಾನ ನಿಲ್ದಾಣದಿಂದ ಪಣಜಿಗೆ ಪಾರಿಕ್ಕರ್ ಅವರನ್ನು ಮೆರವಣಿಗೆಯಲ್ಲಿ ಕರೆ ತರಲಾಗುವುದೆಂದು ಅದು ಪ್ರಕಟಿಸಿತ್ತು.
ಗಡಿಯಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾರಿಕ್ಕರ್ ಅವರನ್ನು ಸನ್ಮಾನಿಸುವ ಬಿಜೆಪಿ ನಿರ್ಧಾರವನ್ನು ಮಿತ್ರಪಕ್ಷ ಎಂಜಿಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಕಟುವಾಗಿ ಟೀಕಿಸಿದ್ದವು.





