‘ಏಕತೆ ಸಾರುವ, ಪರಿವರ್ತನಾ ಶೀಲ ಕೃತಿಗಳು ರಚನೆಯಾಗಲಿ’
ವರ್ಧಮಾನ ಸಾಹಿತ್ಯ ಪ್ರಶಸ್ತಿ ಪ್ರದಾನ

ಮೂಡುಬಿದಿರೆ, ಅ.3: ಸಮಾಜದ ವಿವಿಧ ಸಮುದಾಯಗಳ ನಡುವೆ ಏಕತೆಯನ್ನು ಸಾರುವ, ಪರಿವರ್ತನಾ ಶೀಲತೆಯನ್ನು ಪ್ರತಿಪಾದಿಸುವ ಕೃತಿಗಳು ಹೆಚ್ಚು ರಚನೆಯಾಗಲಿ ಎಂದು ಮೂಡುಬಿದಿರೆ ಶ್ರೀಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ನುಡಿದರು. ಸೋಮವಾರ ಸಂಜೆ ಸಮಾಜ ಮಂದಿರದಲ್ಲಿ ವರ್ಧಮಾನ ಪ್ರಶಸ್ತಿ ಪೀಠದ ಮೂವತ್ತಾರನೆ ವರ್ಷದ 2015ರ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಎಸ್.ಪಿ.ಪದ್ಮಪ್ರಸಾದ್ ಅವರ ಎಪ್ಪತ್ತನೆ ಕೃತಿ, ಅಂಕಣ ಬರಹಗಳ ಸಂಕಲನ ‘ನಾವುನಡೆದ ಹಾದಿ’ ಅನಾವರಣಗೊಳಿಸಿ ಅವರು ಆಶೀರ್ವಚನ ನೀಡಿದರು. ವರುಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ‘ನಿಕಷ-1’ ವಿಮರ್ಶಾ ಕೃತಿಗೆ ತುಮಕೂರಿನ ಡಾ.ಎಸ್.ಪಿ.ಪದ್ಮಪ್ರಸಾದ್ 25 ಸಾವಿರ ರೂ. ಗೌರವ ನಗದು ಸಹಿತ ವರ್ಧಮಾನ ಶ್ರೇಷ್ಠ ಸಾಹಿತ್ಯ ಪ್ರಶಸ್ತಿ ಮತ್ತು ಬಿ.ರಾಘವೇಂದ್ರರಾವ್(ಅನುಬೆಳ್ಳೆ) ಅವರು ತಮ್ಮ ‘‘ಭೂತದ ಕೋಳಿ’ ಕಥಾಸಂಕಲನಕ್ಕೆ 15 ಸಾವಿರ ರೂ. ಗೌರವ ನಗದು ಸಹಿತ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಡಾ.ಎಸ್.ಪಿ.ಪದ್ಮಪ್ರಸಾದ್, ಸಾಹಿತ್ಯ ಅಧ್ಯಯನ ನನ್ನ ಆತ್ಮ ಉದ್ಧಾರಕ್ಕಾಗಿ, ನನ್ನ ಅಲ್ಪಗಳನ್ನು ಕಳೆದುಕೊಳುವುದಕ್ಕಾಗಿ ಬಳಸಿದ್ದೇನೆ ಎಂದರು. ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಮಂದಿರ ಸಭಾದ ವತಿಯಿಂದ ಪ್ರಶಸ್ತಿ ಪುರಸ್ಕೃತರನ್ನು ಎಚ್.ಸುರೇಶ್ ಪ್ರಭು, ದಯಾನಂದ ಪಂಡಿತ್ ಮತ್ತು ಎಂ.ಗಣೇಶ್ ಕಾಮತ್ ಗೌರವಿಸಿದರು. ಪ್ರಶಸ್ತಿ ಪೀಠದ ಪ್ರ.ನಿರ್ದೇಶಕ ಡಾ.ನಾ,ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೋಶಾಧ್ಯಕ್ಷ ಶ್ರೀಪಾಲ್ ಎಸ್.ಸಂದೇಶ ವಾಚಿಸಿದರು. ನಿರ್ದೇಶಕ ನಿರಂಜನ್ ಕುಮಾರ್ ಶೆಟ್ಟಿ ಅಭಿನಂದನಾ ಪತ್ರವನ್ನು ವಾಚಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.





