ಹಿರಿಯರಿಗೆ ಹೊಂದಾಣಿಕೆ ಬದುಕು ಅನಿವಾರ್ಯ: ಅಮರಣ್ಣನವರ್

ಉಡುಪಿ, ಅ.3: ಹಿರಿಯ ನಾಗರಿಕರು ಪೀಳಿಗೆ ನಡುವಿನ ಅಂತರವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಕಿರಿಯರೊಂದಿಗೆ ಹೊಂದಾಣಿಕೆಯ ಬದುಕು ನಡೆಸುವುದು ಇಂದು ಅನಿವಾರ್ಯವಾಗಿದೆ. ಇದರಿಂದ ಕುಟುಂಬ ಕಲಹವನ್ನು ತಪ್ಪಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ಸಂಸ್ಥೆ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದು ಬೆಟ್ಟು, ವಕೀಲರ ಸಂಘದ ಅಧ್ಯಕ್ಷ ಕೆ.ದಯಾನಂದ, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಎ.ಪಿ.ಕೊಡಂಚ, ಉಡುಪಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪೌರಾಯುಕ್ತ ಡಿ.ಮಂಜುನಾಥಯ್ಯ ಭಾಗವಹಿಸಿದ್ದರು.
ಹಿರಿಯರಾದ ದಾಮೋದರ ಎಲ್.ಆಚಾರ್ಯ, ಸುಲತಾ ಕಾಮತ್, ಶಶಿಕಲಾ ಜಿ.ಶೇರಿಗಾರ್, ಕಟಪಾಡಿ ಶಂಕರ ಪೂಜಾರಿ, ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಮತ್ತು ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘವನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷ ಸರಳ ಕಾಂಚನ್, ವೇದಿಕೆಯ ಕಾರ್ಕಳ ಅಧ್ಯಕ್ಷ ದಾಮೋದರ ಶೆಟ್ಟಿ, ಉಡುಪಿ ಉಪಾಧ್ಯಕ್ಷ ವಿಶ್ವನಾಥ ಹೆಗ್ಡೆ, ಕುಂದಾಪುರ ಕಾರ್ಯದರ್ಶಿ ರಾಮ ಗಾಣಿಗ, ಸಿದ್ಧಾಪುರ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ಸ್ಫೂರ್ತಿಧಾಮದ ಜಿ.ಜಿ.ಮೋಳ್ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ್ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





