ಕಾವೇರಿ ಜಲ ನಿರ್ವಹಣೆ ಮಂಡಳಿ: ಸುಪ್ರೀಂ ಮುಂದೆ ತಪ್ಪೊಪ್ಪಿಕೊಂಡ ಕೇಂದ್ರ

ಹೊಸದಿಲ್ಲಿ,ಅ.3: ಕಾವೇರಿ ಜಲ ನಿರ್ವಹಣೆ ಮಂಡಳಿಯನ್ನು ತಾನು ರಚಿಸಲು ಸಾಧ್ಯವಿಲ್ಲ, ಅಂತಹ ಸಮಿತಿಯನ್ನು ರಚಿಸಲು ಸಂಸತ್ತಿನ ಒಪ್ಪಿಗೆ ಅಗತ್ಯವಾಗಿದೆ ಎಂದು ಕೇಂದ್ರ ಸರಕಾರವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಇದನ್ನು ಮೊದಲೇ ಏಕೆ ಹೇಳಲಿಲ್ಲ ಎಂಬ ನ್ಯಾಯಾಲಯದ ಪ್ರಶ್ನೆಗೆ ಕೇಂದ್ರವು, ಆ ಬಗ್ಗೆ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದೆ.
ಕಾವೇರಿ ಜಲ ನಿರ್ವಹಣೆ ಮಂಡಳಿಯನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲ ಯವು ಕಳೆದ ವಾರ ಕೇಂದ್ರಕ್ಕೆ ನಿರ್ದೇಶ ನೀಡಿತ್ತು ಮತ್ತು ಈ ಮಂಡಳಿಯ ತಜ್ಞರು ಕರ್ನಾಟಕ ಮತ್ತು ತಮಿಳುನಾಡುಗಳ ನೀರಿನ ಅಗತ್ಯವನ್ನು ಪರಿಶೀಲಿಸಲು ಉಭಯ ರಾಜ್ಯಗಳಿಗೆ ಭೇಟಿ ನೀಡಬೇಕಾಗಿತ್ತು.
ಮಂಡಳಿ ರಚನೆಯಾಗಬೇಕು ಎಂದು ತಮಿಳುನಾಡು ಬಯಸಿದೆ. ಆದರೆ ಕರ್ನಾಟಕವು ಅದಕ್ಕೆ ಸಿದ್ಧವಿಲ್ಲ. ಕಾವೇರಿ ಕೊಳ್ಳದಲ್ಲಿರುವ ಜಲಾಶಯಗಳಿಗೆ ಭೇಟಿ ನೀಡುವ ತಜ್ಞರ ತಂಡ ನೀರಿನ ಕೊರತೆಯಿದೆ ಎಂಬ ತನ್ನ ವಾದವನ್ನು ಒಪ್ಪಿಕೊಳ್ಳದಿರಬಹುದು ಎಂಬ ಕಳವಳ ಅದನ್ನು ಕಾಡುತ್ತಿದೆ.
ಜಲ ನಿರ್ವಹಣೆ ಮಂಡಳಿ ರಚನೆ ಸಾಧ್ಯವಿಲ್ಲ ಎಂಬ ಹೇಳಿಕೆಗಾಗಿ ತಮಿಳುನಾಡು ಕೇಂದ್ರವನ್ನು ಟೀಕಿಸಿದೆ. ಕರ್ನಾಟಕ ವಿಧಾನಸಭೆಗೆ ಇನ್ನೆರಡು ವರ್ಷಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೇರಲು ಬಿಜೆಪಿಯು ಹವಣಿಸಿರುವುದರಿಂದ ಕೇಂದ್ರವು ಕರ್ನಾಟಕದ ಪರ ವಾಲಿದೆ ಎಂದು ಅದು ಆರೋಪಿಸಿದೆ.







