ಕರ್ನಾಟಕ ಪರ ವಾದ ಮಂಡಿಸಲು ನಾರಿಮನ್ ಸಮ್ಮತಿ

ಬೆಂಗಳೂರು, ಅ.4: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕನಾಟಕದ ಪರ ವಾದ ಮಂಡಿಸಲು ವಕೀಲ ಫಾಲಿ ಎಸ್.ನಾರಿಮನ್ ಒಪ್ಪಿಗೆ ನೀಡಿದ್ದಾರೆ.
ಕರ್ನಾಟಕದ ಕಾನೂನು ತಂಡ ಇಂದು ನಾರಿಮನ್ ಅವರನ್ನು ದಿಲ್ಲಿಯ ಅವರ ನಿವಾಸದಲ್ಲಿ ಭೇಟಿಯಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರು ಕೂಡಾ ನಾರಿಮನ್ ಅವರನ್ನು ಭೇಟಿಯಾಗಿ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶ ಪಾಲಿಸಲು ಕರ್ನಾಟಕ ಒಪ್ಪಿಕೊಂಡಿದ್ದು, ಸದನದ ನಿರ್ಣಯದ ಮಾಹಿತಿಯನ್ನು ನಾರಿಮನ್ ಅವರಿಗೆ ಕರ್ನಾಟಕದ ಕಾನೂನು ತಂಡ ನೀಡಿದೆ. ಪ್ರತಿಪಕ್ಷಗಳ ಟೀಕೆಗೆ ಬೇಸರ ಮಾಡಿಕೊಳ್ಳದಂತೆ ಅವರು ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ಫಾಲಿ ನಾರಿಮನ್ ಅವರು ತಾನು ಇನ್ನು ಮುಂದೆ ಕರ್ನಾಟಕದ ಪರ ವಾದಿಸುವುದಿಲ್ಲ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿತ್ತು.
ತನ್ನ ಪ್ರತಿಷ್ಠಿತೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯವನ್ನು ಬಲಿಪಶು ಮಾಡಿದರೆಂಬ ಆರೋಪ ಹೊತ್ತಿರುವ ನಾರಿಮನ್ ಅವರನ್ನು ಬದಲಾಯಿಸುವಂತೆ ವಿಪಕ್ಷ ನಾಯಕರು ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಆಗ್ರಹಿಸಿದ್ದರು. ಆದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪರ ವಕೀಲರಾಗಿ 32 ವರ್ಷಗಳ ಕಾಲ ಕೆಲಸ ಮಾಡಿರುವ ನಾರಿಮನ್ ಅವರನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
"ನಾರಿಮನ್ ಅವರ ಸಾಮರ್ಥ್ಯ ಮತ್ತು ಬದ್ಧತೆಯನ್ನು ಯಾರೊಬ್ಬರಿಗೂ ಪ್ರಶ್ನಿಸಲು ಅಸಾಧ್ಯ. ಈ ಕಾರಣದಿಂದಾಗಿ ನಾರಿಮನ್ ಅವರ ಬದಲಾವಣೆ ಸಾಧ್ಯವಿಲ್ಲ. ಅ.18ರಂದು ನಡೆಯಲಿರುವ ವಿಚಾರಣೆಯಲ್ಲೂ ನಾರಿಮನ್ ಅವರೇ ರಾಜ್ಯದ ಪರವಾಗಿ ವಾದ ಮಂಡಿಸಲಿದ್ದಾರೆ. ತಂಡಕ್ಕೆ ಹೊಸಬರನ್ನು ಸೇರ್ಪಡೆ ಮಾಡುತ್ತೇವೆಯೇ ವಿನಃ ಯಾವುದೇ ಕಾರಣಕ್ಕೂ ತಂಡದ ಮುಖ್ಯಸ್ಥರ ಬದಲಾವಣೆ ಇಲ್ಲ ” ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ನಾರಿಮನ್ ವಾದ ಮಂಡನೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ತಿಳಿಸಿದ ಬಳಿಕ ಅವರನ್ನು ಮನವೊಲಿಸುವ ಪ್ರಯತ್ನ ನಡೆದಿತ್ತು. ಈ ಕಾರಣಕ್ಕಾಗಿ ಕರ್ನಾಟಕದ ಕಾನೂನು ತಜ್ಞರ ನಿಯೋಗ ಮಾಜಿ ಕೇಂದ್ರ ಸಚಿವ ಹಾಗೂ ವಕೀಲ ಕಪಿಲ್ ಸಿಬಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಈ ವೇಳೆ ಸಿಬಲ್ ಅವರು ನಾರಿಮನ್ ಅವರು ವಾದ ಮಂಡನೆಯಿಂದ ಹಿಂದೆ ಸರಿದರೆ ರಾಜ್ಯದ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವ ಭರವಸೆ ನೀಡಿದ್ದರು.
ನಾರಿಮನ್ ಬೆಳಗ್ಗಿನ ತನಕ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಸೂಚನೆ ಕಂಡು ಬಾರದೆ ಇದ್ದಾಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಾರಿಮನ್ ಮನವೊಲಿಸುವ ಯತ್ನಕ್ಕಾಗಿ ದಿಲ್ಲಿಗೆ ತೆರಳುವ ಯೋಜನೆ ರೂಪಿಸಿದ್ದರು. ಈ ಉದ್ದೇಶಕ್ಕಾಗಿ ತನ್ನ ಇಂದಿನ ಪೂರ್ವ ನಿಯೋಜಿತ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.







