ಎಂಆರ್‌ಪಿಎಲ್ ವಿರುದ್ಧ ಮೇಯರ್‌ರಿಂದ ಪ್ರತಿಭಟನೆಯ ಎಚ್ಚರಿಕೆ
ಹದಗೆಟ್ಟ ಎಂಆರ್‌ಪಿಎಲ್ ರಸ್ತೆ ದುರಸ್ತಿಗೆ 20 ದಿನಗಳ ಗಡುವು

ಮಂಗಳೂರು, ಅ.4: ಸುರತ್ಕಲ್ ಕಾನ ನಡುವಿನ ಎಂಆರ್‌ಪಿಎಲ್ ರಸ್ತೆ ತೀರಾ ಹದಗೆಟ್ಟು ಸಾರ್ವಜನಿಕರ ಪ್ರಯಾಣ ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆಯಲ್ಲಿ ಎಂಆರ್‌ಪಿಎಲ್ ಕಂಪೆನಿಗೆ ಸೇರಿದ ಶೇ.95ರಷ್ಟು ಘನವಾಹನಗಳು ಸಂಚರಿಸುತ್ತಿರುವುದರಿಂದ ಈ ರಸ್ತೆ ಹದಗೆಟ್ಟಿದ್ದು, ಮುಂದಿನ 20 ದಿನಗಳೊಳಗೆ ಇದನ್ನು ಸಮರ್ಪಕವಾಗಿ ದುರಸ್ತಿ ಮಾಡದಿದ್ದರೆ ಸಾರ್ವಜನಿಕ ಜತೆ ಮನಪಾದ ಎಲ್ಲಾ ಸದಸ್ಯರು ಸೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಮೇಯರ್ ಹರಿನಾಥ್ ಎಚ್ಚರಿಸಿದ್ದಾರೆ.
ಮನಪಾ ಮೇಯರ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 4.5 ಕಿ.ಮೀ. ಉದ್ದದ ರಸ್ತೆ ದುರಸ್ತಿಗೆ 3 ಕೋಟಿ ರೂ.ಗೂ ಅಧಿಕ ವೆಚ್ಚ ತಗಲಿದೆ ಎಂದವರು ಹೇಳಿದರು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಎಂಆರ್‌ಪಿಎಲ್ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ರಸ್ತೆ ದುರಸ್ತಿಗೆ ಆಗ್ರಹಿಸಲಾಗಿತ್ತು. ಮುಖ್ಯಮಂತ್ರಿಗೆ ಬರೆದ ಪತ್ರಕ್ಕೆ ಅವರ ಅಧೀನ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಂಬಂಧಪಟ್ಟ ಕಂಪೆನಿಯಿಂದ ಯಾವುದೇ ಉತ್ತರ ಬಂದಿಲ್ಲ. ಆ ಕಂಪೆನಿಯ ಘನವಾಹನಗಳು ದಿನನಿತ್ಯ ಓಡುತ್ತಿರುವುದಿಂದಾಗಿಯೇ ಆ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಅದರ ದುರಸ್ತಿಯನ್ನು ಕಂಪೆನಿಯೇ ಮಾಡಬೇಕು ಎಂದು ಅವರು ತಾಕೀತು ಮಾಡಿದರು.
ಜನವರಿಯೊಳಗೆ ಗುಜ್ಜರಕೆರೆ ಅಭಿವೃದ್ಧಿ ಪೂರ್ಣ!
ನಗರದ ಗುಜ್ಜರಕೆರೆ ಅಭಿವೃದ್ಧಿಗಾಗಿ ಮನಪಾ 50 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದೆ. ಇದರ ಅಭಿವೃದ್ಧಿಗೆ ಸುಮಾರು 3 ಕೋಟಿ ರೂ.ಗಳ ಅಗತ್ಯವಿದೆ. ಕೆರೆಯ ಸುತ್ತಮುತ್ತಲಿನ ಒಳಚರಂಡಿ ನೀರು ಕೆರೆಗೆ ಸೇರುತ್ತಿರುವುದರಿಂದ ಅದು ಸಂಪೂರ್ಣ ಹಾಳಾಗಿದೆ. ಅದಕ್ಕಾಗಿ ಕೆರೆಯ ಸುತ್ತಮುತ್ತಲಿನ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸುವ ಮೂಲಕ ಗುಜ್ಜರೆಕೆರೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಮೇಯರ್ ಹರಿನಾಥ್ ತಿಳಿಸಿದರು. ಈ ಮೂಲಕ ಆ ಪ್ರದೇಶದ ಅಭಿವೃದ್ಧಿಯೂ ಆಗಲಿದೆ. ಸುಮಾರು 1.5 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗುವುದು. ಇದಕ್ಕಾಗಿ ಮನಪಾದ ಒಳಚರಂಡಿ ನಿಧಿಯಿಂದ ಹಣವನ್ನು ಉಪಯೋಗಿಸಲಾಗುವುದು. ಮುಂದಿನ ಜನವರಿಯೊಳಗೆ ಈ ಕಾಮಗಾರಿಯನ್ನು ಮುಗಿಸಲು ಅಂದಾಜಿಸಾಗಿದೆ ಎಂದು ಅವರು ಹೇಳಿದರು.







