ಅಮ್ಮನ ಆರೋಗ್ಯದ ಬಗ್ಗೆ ನಾಳೆ ಮಾಹಿತಿ ನೀಡಿ : ತಮಿಳುನಾಡು ಸರಕಾರಕ್ಕೆ ಹೈಕೋರ್ಟ್ ಹುಕುಂ

ಚೆನ್ನೈ, ಅ.4: ಅನಾರೋಗ್ಯದಿಂದಾಗಿ ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯದ ಬಗ್ಗೆ ಬುಧವಾರ ಪೂರ್ಣ ಮಾಹಿತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಇಂದು ತಮಿಳುನಾಡು ಸರಕಾರಕ್ಕೆ ಆದೇಶ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ .ಈ ಆದೇಶ ನೀಡಿದೆ. ಇತ್ತೀಚೆಗೆ ಜ್ವರ ಮತ್ತು ಡಿಹೈಡ್ರೇಶನ್( ನಿರ್ಜಲಿಕರಣ) ಸಮಸ್ಯೆಯಿಂದ ಸಿಎಂ ಜಯಲಲಿತಾ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರು ಇತ್ತೀಚೆಗೆ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಸಭೆ ನಡೆಸಿದ್ದರು ಎಂದು ಹೇಳಲಾಗಿತ್ತು. ಈ ಸಭೆಯ ಫೋಟೋ ಕೂಡ ಬಿಡುಗಡೆ ಮಾಡಬೇಕು. ಜಯಲಲಿತಾ ದಾಖಲಾಗಿರುವ ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆ ತಡೆ ನಿರ್ಮಿಸಲಾಗಿದೆ . ಇದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದ್ದು ಇದನ್ನು ತೆರವುಗೊಳಿಸಲು ಆದೇಶ ನೀಡುವಂತೆ ಟ್ರಾಫಿಕ್ ರಾಮಸ್ವಾಮಿ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.





