ಅಂಗನವಾಡಿ ಕಾರ್ಯಕರ್ತೆ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಧರಣಿ

ಮುಂಡಗೋಡ, ಅ.4: ಅಂಗನವಾಡಿ ಕಾರ್ಯಕರ್ತೆಯ ನೇಮಕಾತಿ ವಿಷಯದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಅಗಡಿ ಗ್ರಾಮದ ಶಾಂತಿನಗರ ಓಣಿಯ ನಿವಾಸಿಗಳು ಸೋಮವಾರ ಮುಂಡಗೋಡ ತಹಶೀಲ್ದಾರ್ ಕಾರ್ಯಾಲಯದ ಎದುರು ಧರಣಿ ಆರಂಭಿಸಿದ್ದಾರೆ.
ಅಗಡಿ ಗ್ರಾಮದ ಶಾಂತಿನಗರ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರ ನೇಮಕಾತಿ ವಿಷಯದಲ್ಲಿ ಶಾಂತಿನಗರ ಓಣಿಯ ಅಭ್ಯರ್ಥಿ ಪುಷ್ಪಾಪ್ರವೀಣ ಗರಗದ ಅವರಿಗೆ ಅನ್ಯಾಯವಾಗಿದೆ ಇದನ್ನು ಸರಿಪಡಿಸುವಂತೆ ಧರಣಿನಿರತರು ಆಗ್ರಹಿಸಿದರು. ‘‘ನಾನು ಅಗಡಿ ಗ್ರಾಮದ ಶಾಂತಿನಗರ ಓಣಿಯ ಕಾಯಂ ನಿವಾಸಿ. ಶಾಂತಿನಗರ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಸ್ಥಳೀಯ ಅಭ್ಯರ್ಥಿ ಆಗಿದ್ದರೂ ನನ್ನನ್ನು ಕಡೆಗಣಿಸಿ ಅಗಡಿ ಗ್ರಾಮದ ಬೇರೆ ಓಣಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಈ ವಿಷಯದಲ್ಲಿ ತಾಲೂಕಾ ಯೋಜನಾ ಅಧಿಕಾರಿ(ಸಿ.ಡಿ.ಪಿ.ಒ.) ಸ್ಥಳೀಯ ರಾಜಕಾರಣ ವ್ಯಕ್ತಿಗಳ ಮಾತು ಕೇಳಿ ತನಗೆ ಅನ್ಯಾಯ ಮಾಡಿದ್ದಾರೆ. ಈ ವಿಚಾರವಾಗಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಕಚೇರಿಗೆ ಹೋಗಿ ಮನವಿ ಮಾಡಿದರೂ ನ್ಯಾಯ ಸಿಕ್ಕಿಲ್ಲ ಎಂದು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಪುಷ್ಪಾಗರಗದ ಅಳಲು ತೋಡಿಕೊಂಡಿದ್ದಾರೆ.





