ತುಂಬೆ ನೂತನ ಡ್ಯಾಂನಲ್ಲಿ 5 ಮೀ. ವರೆಗೆ ಮಾತ್ರ ನೀರು ಸಂಗ್ರಹ: ಮೇಯರ್

ಮಂಗಳೂರು, ಅ.4: ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಸುವ ಉದ್ದೇಶದಿಂದ ತುಂಬೆಯಲ್ಲಿ ನಿರ್ಮಾಣದ ಮುಕ್ತಾಯ ಹಂತದಲ್ಲಿರುವ 7 ಮೀಟರ್ ಎತ್ತರದ ನೂತನ ಅಣೆಕಟ್ಟಿನಲ್ಲಿ ಪ್ರಸಕ್ತ ವರ್ಷ 5 ಮೀಟರ್‌ವರೆಗೆ ಮಾತ್ರ ನೀರು ಶೇಖರಿಸಲು ನಿರ್ಧರಿಸಲಾಗಿದೆ. ಇದರಿಂದ ಸದ್ಯ ಸುತ್ತಮುತ್ತಲಿನ ಯಾವುದೇ ಪ್ರದೇಶ ಮುಳುಗಡೆಯಾಗುವುದಿಲ್ಲ ಎಂದು ಮೇಯರ್ ಹರಿನಾಥ್ ಸ್ಪಷ್ಟಪಡಿಸಿದ್ದಾರೆ. 7 ಮೀಟರ್‌ವರೆಗೆ ನೀರು ನಿಲ್ಲಿಸುವ ಸಂದರ್ಭ ಮುಳುಗಡೆಯಾಗುವ ಅಣೆಕಟ್ಟಿನ ಸುತ್ತಮುತ್ತಲಿನ ಸರ್ವೆ ಕಾರ್ಯ ಹಾಗೂ ಪರಿಹಾರ ವಿತರಣೆ ಕುರಿತಂತೆ ಈಗಾಗಲೇ ವಿವಿಧ ಹಂತಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಈಗಾಗಲೇ ಮೂರು ಹಂತದ ಸರ್ವೇ ಮುಗಿದಿದ್ದು, ನಾಲ್ಕನೆ ಹಂತದ ಸರ್ವೇ ಕಾರ್ಯ ಆರಂಭಗೊಂಡಿದೆ. ಕಳ್ಳಿಗೆ ಹಾಗೂ ಸಜಿಪನಡು ಪ್ರದೇಶಗಳ ಸರ್ವೇ ಆಗಬೇಕಾಗಿದೆ. ಪ್ರಥಮ ಹಂತದ ಭೂಸ್ವಾಧೀನಕ್ಕೆ ಸಂಬಂಧಿಸಿ ಪರಿಹಾರ ನೀಡಲು ಸುಮಾರು 50 ಕೋಟಿ ರೂ. ಅಗತ್ಯವಿದೆ. ಅದಕ್ಕಾಗಿ ಸರಕಾರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಮೇಯರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
Next Story





