ಬಂಟ್ವಾಳ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಬೈಕ್ ಸವಾರ ಮೃತ್ಯು

ಬಂಟ್ವಾಳ, ಅ.4: ಸರಕಾರಿ ಬಸ್ಸೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 234ರ ಬಂಟ್ವಾಳ ಸಮೀಪದ ಮಣಿಹಳ್ಳ ಬಳಿ ಸಂಭವಿಸಿದೆ.
ಪಿಲಾತಬೆಟ್ಟು ಗ್ರಾಮದ ಕೊಡೆಂಜಾರು ನಿವಾಸಿ ಜನಾರ್ದನ ರೈ ಎಂಬವರ ಪುತ್ರ, ಬೈಕ್ ಸವಾರ ಸುಶಾಂತ್ ರೈ(30) ಮೃತ ಯುವಕ. ಇಂದು ಅಪರಾಹ್ನ ಸುಶಾಂತ್ ತನ್ನ ಬೈಕಿನಲ್ಲಿ ಕಾರ್ಯ ನಿಮಿತ್ತ ಬಂಟ್ವಾಳ ಕಡೆಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ವೇಳೆ ಮಣಿಹಳ್ಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.
ಧರ್ಮಸ್ಥಳದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್ ಯಾವುದೋ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ವಿರುದ್ಧ ದಿಕ್ಕಿನಲ್ಲಿ ಧಾವಿಸಿ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಸುಶಾಂತ್ ಬಸ್‌ನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಅವರನ್ನು ಸ್ಥಳೀಯರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದ್ದಾರೆ ಎನ್ನಲಾಗಿದೆ.
ಬಸ್ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅವಘಡಕ್ಕೆ ಕಾರಣವೆನ್ನಲಾಗಿದ್ದು ಆಕ್ರೋಶಗೊಂಡ ಸ್ಥಳೀಯ ಜನರು ಸ್ಥಳದಿಂದ ಬಸ್ ತೆಗೆಯದಂತೆ ತಡೆಹಿಡಿದು ರಸ್ತೆ ತಡೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಗೌಡ, ನಗರ ಠಾಣೆಯ ಎಸ್ಸೈ ನಂದಕುಮಾರ್, ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಆಕ್ರೋಶಿತ ಜನರ ಮನವೊಲಿಸಿ ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಮತ್ತು ನಿರ್ವಾಹಕ ಬಸ್‌ನಿಂದ ಇಳಿದು ಪರಾರಿಯಾಗಿದ್ದಾರೆ.
ಮೃತ ಸುಶಾಂತ್ ಕುಟುಂಬ ಮೂಲತಃ ಸಕಲೇಶಪುರದವರಾಗಿದ್ದು ಪಿಲಾಯಬೆಟ್ಟುವಿವಲ್ಲಿ ಮನೆ ನಿರ್ಮಿಸಿ ವಾಸವಾಗಿದ್ದರು. ಬಂಟ್ವಾಳದ ಹಿಂದೂಸ್ತಾನ್ ಸೋಪ್ ಪ್ರೈವೆಟ್ ಲಿಮಿಟೆಡ್‌ನ ಉದ್ಯೋಗಿಯಾಗಿದ್ದು ವರ್ಷದ ಹಿಂದೆ ಮದುವೆಯಾಗಿದ್ದು ಪತ್ನಿ ತುಂಬು ಗರ್ಭಿಣಿಯಾಗಿದ್ದಾರೆ.







