ಕುಸ್ತಿ ಪಂದ್ಯದಲ್ಲಿ ಸೂರಜ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ: ಸಂಭ್ರಮಾಚರಣೆ

ಮಂಗಳೂರು, ಅ.4: ಇತ್ತೀಚೆಗೆ ನಡೆದ ದ.ಕ. ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕ- ಬಾಲಕಿಯರ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಮುಡಿಪು ಸೂರಜ್ ಪದವಿ ಪೂರ್ವ ಕಾಲೇಜಿನ ಬಾಲಕರು ಚಾಂಪಿಯನ್‌ಶಿಪ್ ಹಾಗೂ ಬಾಲಕಿಯರು ರನ್ನರ್ ಅಪ್ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಇಂದು ನಗರದ ಜ್ಯೋತಿ ಸರ್ಕಲ್‌ನಿಂದ ಎ.ಬಿ. ಶೆಟ್ಟಿ ಸರ್ಕಲ್ ಮೂಲಕ ಮೆರವಣಿಗೆ ಸಾಗಿ ನಗರದ ಪುರಭವನದ ಮುಂಭಾಗ ವಿಜಯೋತ್ಸವ ಆಚರಿಸಲಾಯಿತು.
ಈ ಕುಸ್ತಿ ಪಂದ್ಯಾಟವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಸೂರಜ್ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಮುಡಿಪು ಸೂರಜ್ ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ವಿಜಯೋತ್ಸವದ ಬಳಿಕ ಮಾತನಾಡಿದ ಸೂರಜ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್, ಗ್ರಾಮೀಣ ಕ್ರೀಡೆಯಾದ ಕುಸ್ತಿ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರೋತ್ಸಾಹ ದೊರೆಯಬೇಕಾದ ಅವಶ್ಯಕತೆಯಿದೆ. ಆರೋಗ್ಯಕರವಾದ ಆಟವಾದ ಕುಸ್ತಿಯತ್ತ ಯುವಜನರು ಕೂಡಾ ಹೆಚ್ಚಿನ ಒಲವು ತೋರಿಸಬೇಕು. ಜಿಲ್ಲಾಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಕಾರ್ಯ ಶ್ಲಾಘನಾರ್ಹ ಎಂದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಅವರು ಸಂಸ್ಥೆಯ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು. ದ.ಕ. ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷ ಪ್ರಕಾಶ್ ಕರ್ಕೇರಾ, ಉಪಾಧ್ಯಕ್ಷ ಸತೀಶ್ ರಾವ್ ಬೋಳಾರ್, ಅಶೋಕ್, ದೈಹಿಕ ಶಿಕ್ಷಣ ಶಿಕ್ಷಕ ಸಂದೀಪ್, ಕೋಕಿಲ ಮತ್ತಿತರರು ಉಪಸ್ಥಿತರಿದ್ದರು.







