ಕಾಸರಗೋಡು: 8 ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನಗಳ ವಶ

ಕಾಸರಗೋಡು, ಅ.4: ಗೋದಾಮಿನಲ್ಲಿ ದಾಸ್ತಾನಿರಿಸಲಾಗಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನಗಳನ್ನು ಬದಿಯಡ್ಕ ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಏತಡ್ಕ ಪುತ್ರಕಳದ ಹರಿಪ್ರಸಾದ್ (22) ಮತ್ತು ಕರ್ನಾಟಕ ಆರ್ಲಪದವು ಕೊಣಾಜೆಯ ಸಂದೇಶ್ (22) ಎಂದು ಗುರುತಿಸಲಾಗಿದೆ.
ಕರ್ನಾಟಕದಿಂದ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ತಂದು ಬಳಿಕ ಜಿಲ್ಲೆಯ ಹಲವಡೆಗಳಿಗೆ ಇಲ್ಲಿಂದ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ. ಕೆಲ ದಿನಗಳ ಕಾಞಂಗಾಡ್‌ನಲ್ಲಿ ಪಾನ್‌ಮಸಾಲ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂದರ್ಭ ಬಂಧಿತರು ಬದಿಯಡ್ಕದ ಗೋದಾಮಿನಿನಿಂದ ಪಾನ್ ಮಸಾಲ ಉತ್ಪನ್ನಗಳನ್ನು ಸಾಗಾಟ ಮಾಡಿದ್ದಾಗಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ 8 ಲಕ್ಷ ರೂ. ಮೌಲ್ಯದ ಪಾನ್‌ಮಸಾಲ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ನೂರಕ್ಕೂ ಅಧಿಕ ಗೋಣಿ ಚೀಲಗಳಲ್ಲಿ ಪಾನ್ ಮಸಾಲ ಉತ್ಪನ್ನಗಳನ್ನು ದಾಸ್ತಾನಿಟ್ಟಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





