ವಾಯುವಿಹಾರದಿಂದ ದೈಹಿಕ, ಮಾನಸಿಕ ಸ್ವಾಸ್ಥ: ನಾ.ಡಿಸೋಜಾ
ವಾರ್ಷಿಕ ಸಮ್ಮಿಲನ ಕಾರ್ಯಕ್ರಮ
.jpg)
ಸಾಗರ, ಅ.4: ವಾಯುವಿಹಾರದಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಾಹಿತಿ ಡಾ. ನಾ.ಡಿಸೋಜಾ ಹೇಳಿದರು. ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಮಂಗಳವಾರ ನಿಸರ್ಗ ವಾಯುವಿಹಾರಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು. ಲಾಗಾಯ್ತಿನಿಂದ ಮನುಷ್ಯ ಸಂಘಜೀವಿ. ಆದರೆ ವಾಕಿಂಗ್ ಸಂದರ್ಭದಲ್ಲಿ ಏಕಾಂಗಿಯಾಗಿ ನಡೆಯುತ್ತಾ, ತನ್ನೊಳಗಿನ ವಿಷಯಗಳನ್ನು ಮಂಥನ ಮಾಡುತ್ತಾ ಇರುತ್ತಾನೆ. ನಡಿಗೆ ಸಂದರ್ಭದಲ್ಲಿ ಏಕಾಗ್ರತೆ ಅತಿಮುಖ್ಯ. ಇದರಿಂದ ಮನಸ್ಸು ಆಹ್ಲಾದಕರವಾಗಿರುತ್ತದೆ. ಬದಲಾದ ದಿನಮಾನಗಳಲ್ಲಿ ಮನುಷ್ಯ ಒತ್ತಡದಲ್ಲಿದ್ದಾನೆ. ವಾಕಿಂಗ್, ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ನೆಮ್ಮದಿಯಾಗಿ ಇರಬಹುದು ಎಂದರು. ನಿಸರ್ಗ ವಾಯುವಿಹಾರಿಗಳ ಸಂಘ ತನ್ನ ಸಂಘಟನಾತ್ಮಕ ಚಟುವಟಿಕೆ ಮೂಲಕ ಸದಸ್ಯರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡುತ್ತಿದೆ. ವಾಯುವಿಹಾರ ಮುಗಿದ ನಂತರ ಸಂಘದ ಚೌಕಟ್ಟಿನೊಳಗೆ ಕುಳಿತು ಪರಸ್ಪರ ಚರ್ಚೆ ನಡೆಸಿ, ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಈಗಾಗಲೇ ನಗರಸಭೆ ಸಂಘದ ಅನೇಕ ಬೇಡಿಕೆಗಳನ್ನು ಈಡೇರಿಸಿದೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಸಾಲುಮರಗಳು, ವಿದ್ಯುತ್ ದೀಪದ ಬೇಡಿಕೆ ಈಡೇರಿದೆ. ಇಲ್ಲಿ ಅನೇಕರು ಬರುತ್ತಿರುವುದರಿಂದ ಶೌಚಾಲಯ ಅಗತ್ಯವಾಗಿದೆ. ಅದನ್ನು ತುರ್ತಾಗಿ ನಿರ್ಮಾಣ ಮಾಡುವತ್ತ ನಗರಸಭೆ ಗಮನ ಹರಿಸಬೇಕು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಡಾ. ಎ.ಡಿ.ರುದ್ರಪ್ಪಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಪ್ರೊ. ಅ.ರಾ.ಲಂಬೋಧರ್, ಕೋಮಲ್ ರಾಘವೇಂದ್ರ, ಎಂ.ಆರ್.ಇಂಧೂಮತಿ, ವಾಣಿಶ್ರೀ, ಸಿ.ಎಸ್.ಎಂ.ಗುಪ್ತ, ಮುಹಮ್ಮದ್ ಝಕರಿಯಾ ಮತ್ತಿತರರು ಉಪಸ್ಥಿತರಿದ್ದರು.





