ಕಳವು ಪ್ರಕರಣ: ಮೂವರು ಆರೋಪಿಗಳ ಸಹಿತ ಸೊತ್ತು ವಶ

ದಾವಣಗೆರೆ, ಅ.4: ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಬಿಎ ಪದವೀಧರ ಸೇರಿದಂತೆ ಮೂವರನ್ನು ಬಂಧಿಸಿರುವ ಜಗಳೂರು ಠಾಣೆ ಪೊಲೀಸರು, ಬಂಧಿತರಿಂದ 3.15 ಲಕ್ಷ ರೂ. ವೌಲ್ಯದ 114 ಗ್ರಾಂ. ಬಂಗಾರದ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಎಸ್. ಗುಳೇದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿಗಳಾದ ವಿನಯ್ ಅಲಿಯಾಸ್ ವಿನಯ್‌ಪ್ರಸಾದ್(22), ವೆಂಕಟೇಶ್ ನಾಯ್ಕ (29) ಹಾಗೂ ಗಜೇಂದ್ರ ನಾಯ್ಕ (23) ಬಂಧಿತರು. ಈ ಮೂವರ ಪೈಕಿ ಗಜೇಂದ್ರ ನಾಯ್ಕ ಎಂಬಿಎ ಪದವೀಧರನಾಗಿದ್ದು, ರ್ಯಾಂಕ್ ವಿಜೇತನಾಗಿದ್ದಾನೆ ಎಂದರು.
ಸೆ.29ರಂದು ಜಗಳೂರು ಪಟ್ಟದ ಜಿಡ್ಡಿಕೆರೆಯ ನಿವಾಸಿ ಅಕಮ್ಮ ಎಂಬವರು ತಮ್ಮ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಬೈಕ್‌ನಲ್ಲಿ ಆಗಮಿಸಿದ ಮೂವರು ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಅಕ್ಕಮ್ಮ ಅ.2ರಂದು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಮಾಹಿತಿ ನೀಡಿದರು. ಪ್ರಕರಣ ದಾಖಲಿಸುವ ಸಂದರ್ಭ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್‌ನ ನಂಬರ್ ಅನ್ನು ಪೊಲೀಸರಿಗೆ ನೀಡಿದ್ದರು. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ವಿನಯ್ ಅಲಿಯಾಸ್ ವಿನಯ್ ಪ್ರಸಾದ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ ನಂತರ ಆತ ನೀಡಿದ ಮಾಹಿತಿ ಮೇರೆಗೆ ಈ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಿದ ಸಂದರ್ಭ ತಾವು ಬೈಕ್‌ಗಳಲ್ಲಿ ಸಂಚರಿಸಿ, ಜಗಳೂರು, ನಾಯಕನಹಟ್ಟಿ, ತುರವನೂರು, ದಂಡಿನಕುರುಬರಹಟ್ಟಿ ಗೇಟ್ ಬಳಿ, ಚಿತ್ರದುರ್ಗದ ಫ್ರೆಂಡ್ಸ್ ಕಾಲನಿ ಬಳಿ, ಮಲ್ಲಾಪುರ ಗೊಲ್ಲರಹಟ್ಟಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಚಾಕು ತೋರಿಸಿ, ಚಿನ್ನಾಭರಣ ದರೋಡೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಬಂಧಿತರಿಂದ 3.15 ಲಕ್ಷ ರೂ. ವೌಲ್ಯದ 114 ಗ್ರಾಂ. ಬಂಗಾರ ಹಾಗೂ ನಾಯಕಹಟ್ಟಿ ಗ್ರಾಮದ ರಸ್ತೆಯಲ್ಲಿ ಕಿತ್ತುಕೊಂಡು ಹೋಗಿ, ಚಿತ್ರದುರ್ಗದ ಅಟಿಕಾ ಗೋಲ್ಡ್‌ನಲ್ಲಿ ಮಾರಾಟ ಮಾಡಿದ್ದ 32 ಗ್ರಾಂ. ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹೆಚ್ಚುವರಿ ಎಸ್ಪಿ ಯಶೋಧಾ ವಂಟಗೋಡಿ ಹಾಗೂ ಹರಪನಹಳ್ಳಿ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿರುವ ಸಿಬ್ಬಂದಿಗೆ ಸೂಕ್ತ ಬಹುಮಾನ ಘೋಷಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ಪಾಂಡುರಂಗಯ್ಯ, ಪಿಎಸ್ಸೈ ಪ್ರಸಾದ್ ಉಪಸ್ಥಿತರಿದ್ದರು.







