ಅಂಗನವಾಡಿ ಕಾರ್ಯಕರ್ತರ ನೇಮಕಾತಿಯಲ್ಲಿ ಅನ್ಯಾಯ: ಧರಣಿ

ಮುಂಡಗೋಡ, ಅ.4: ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ವಿಷಯದಲ್ಲಿ ಅನ್ಯಾಯವಾದ ಬಗ್ಗೆ ಸೋಮವಾರ ಮುಂಡಗೋಡ ತಹಶೀಲ್ದಾರ್ ಕಚೇರಿ ಮುಂದೆ ತಾಲೂಕಿನ ಅಗಡಿ ಗ್ರಾಮದ ಶಾಂತಿನಗರ ಓಣಿಯ ನಿವಾಸಿಗಳು ಧರಣಿ ಸತ್ಯಾಗ್ರಹ ಆರಂಭಿಸಿದರು.
ಅಗಡಿ ಗ್ರಾಮದ ಶಾಂತಿನಗರ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರ ನೇಮಕಾತಿ ವಿಷಯದಲ್ಲಿ ನಮ್ಮ ಓಣಿಯ ಸ್ಥಳೀಯ ಅಭ್ಯರ್ಥಿಯಾದ ಪುಷ್ಪಾ ಪ್ರವೀಣ ಗರಗದ ಅವರಿಗೆ ಅನ್ಯಾಯವಾಗಿದೆ. ಈ ವಿಷಯವನ್ನು ಖಂಡಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದು ಮುಂಡಗೋಡ ತಾಲೂಕಿನ ಅಗಡಿ ಗ್ರಾಮದ ಶಾಂತಿನಗರ ಓಣಿಯ ನಿವಾಸಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧರಣಿ ನಿರತ ಪುಷ್ಪಾ ಗರಗದ, ಶಾಂತಿನಗರ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ನಾನು ಸ್ಥಳೀಯ ಅಭ್ಯರ್ಥಿ ಆಗಿದ್ದರೂ ಅಗಡಿ ಗ್ರಾಮದ ಬೇರೆ ಓಣಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನನಗೆ ಅನ್ಯಾಯ ಮಾಡಿದ್ದಾರೆ ಎಂದರು.
ನೇಮಕಾತಿ ವಿಷಯದಲ್ಲಿ ತಾಲೂಕು ಯೋಜನಾ ಅಧಿಕಾರಿ ಅವರು ಸ್ಥಳೀಯ ರಾಜಕೀಯ ವ್ಯಕ್ತಿಗಳ ಮಾತು ಕೇಳಿ ನನಗೆ ಅನ್ಯಾಯ ಮಾಡಿರುತ್ತಾರೆ. ಈ ವಿಷಯದಲ್ಲಿ ನಾನು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಕಚೇರಿಗೆ ಹೋಗಿ ಮನವಿ ಮಾಡಿದರೂ ನನಗೆ ನ್ಯಾಯ ದೊರಕಿಲ್ಲ ಎಂದು ಆರೋಪಿಸಿದರು.







