ಪ್ರಕೃತಿಯ ಸ್ವಚ್ಛತೆ ಪ್ರತಿ ನಾಗರಿಕನ ಕರ್ತವ್ಯ: ಅಣ್ಣಾಮಲೈ
ಸ್ವಚ್ಛತಾ ಕಾರ್ಯಕ್ರಮ

ಚಿಕ್ಕಮಗಳೂರು, ಅ.4: ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತೀ ನಾಗರಿಕರ ಕರ್ತವ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅಭಿಪ್ರಾಯಪಟ್ಟರು.
ಚಿಕ್ಕಮಗಳೂರಿನ ಅಡ್ವಂಚರ್ಸ್ ಸ್ಪೋರ್ಟ್ಸ್ ಕ್ಲಬ್ ಹಮ್ಮಿಕೊಂಡ ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಿಸುವ ಮೂಲಕ ಗಾಂಧಿ ಜಯಂತಿಯನ್ನು ಆಯೋಜಿಸಿದ ಸಮಾರಂಭದಲ್ಲಿ ಮಾತನಾಡಿದರು. ಪ್ರವಾಸಿಗರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕಾಗಿದೆ. ಗಿರಿಪ್ರದೇಶ ರಾಜ್ಯದಲ್ಲೇ ಅತ್ಯಂತ ಎತ್ತರದ ಸುಂದರತಾಣ. ಇಲ್ಲಿಗೆ ಬರುವವರು ಪರಿಸರವನ್ನು ಹಾಳುಗೆಡವದೆ ಮತ್ತಷ್ಟು ಚಂದಗಾಣಿಸಲು ಪ್ರಯತ್ನಿಸಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕೆಲಸವಾಗಬೇಕು. ಸಾಧ್ಯವಾದಷ್ಟು ವಾತಾವರಣವನ್ನು ನಿರ್ಮಲವಾಗಿಟ್ಟುಕೊಳ್ಳಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬೇಕೆಂದರು.
ಅಡ್ವಂಚರ್ಸ್ ಸ್ಪೋರ್ಟ್ಸ್ ಕ್ಲಬ್‌ಅಧ್ಯಕ್ಷೆ ನಳಿನಾ ಡಿಸಾ ಮಾತನಾಡಿ, ರಜೆ ದಿನ ಹಾಗೂ ವಾರದ ಕೊನೆಯಲ್ಲಿ ಪ್ರವಾಸಿಗರ ದಂಡು ಮುಳ್ಳಯ್ಯನಗಿರಿಯತ್ತ ಹರಿದುಬರುತ್ತದೆ.
ತಿಂಡಿ ತೀರ್ಥ, ಪಾನೀಯ ಸೇವಿಸಿದವರು ತ್ಯಾಜ್ಯವನ್ನು ಎಸೆದು ಸುಂದರ ತಾಣವನ್ನು ತಿಪ್ಪೆಗುಂಡಿ ಮಾಡುತ್ತಿರುವುದು ವಿಷಾದನೀಯ. ಕೈಮರದ ಚೆಕ್‌ಪೋಸ್ಟ್‌ನ ತಪಾಸಣೆಯನ್ನು ಬಲಯುತಗೊಳಿಸುವುದರಿಂದ ಲಿಕ್ಕರ್ ನಿಯಂತ್ರಿಸಬಹುದು. ಐಸ್‌ಕ್ರೀಮ್‌ಗಾಡಿಗಳು ಸೇರಿದಂತೆ ಅಂಗಡಿಗಳನ್ನು ನಿಯಂತ್ರಿಸುವುದರಿಂದ ಪ್ಲಾಸ್ಟಿಕ್ ಕಸವನ್ನು ತಡೆಯಬಹುದೆಂದರು.
ಕಾರ್ಯದರ್ಶಿ ವಿವೇಕ್, ಸದಸ್ಯರಾದ ಕಿಶನ್‌ಗೌಡ, ಕೃಷ್ಣ, ಡಾ.ಕುಚೇಂದ್ರ, ಡಾ. ಮೇಘಾ, ನಗರಸಭಾ ಸದಸ್ಯ ರೂಬಿನ್ ಮೊಸೆಸ್ ನೇತೃತ್ವದ ಸ್ಪೋರ್ಟ್ಸ್ ಕ್ಲಬ್ ತಂಡದೊಂದಿಗೆ ಆರ್.ಪಿ.ಐ. ಪಾಲಾಕ್ಷಪ್ಪ ನೇತೃತ್ವದ ಪೊಲೀಸ್ ತರಬೇತಿ ಪಡೆಯುತ್ತಿರುವ ಮಹಿಳೆಯರು ಸುಮಾರು 4 ಕಿ.ಮೀ.ವ್ಯಾಪ್ತಿಯಲ್ಲಿ ಗಿರಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಕಾರ್ಯವೈಖರಿ: ಬೆಳಗ್ಗೆ ಸೂರ್ಯನ ಕಿರಣಗಳು ಚುರುಕು ಮುಟ್ಟಿಸುವ ಸಂದರ್ಭದಲ್ಲೇ ಗಿರಿಶಿಖರ ಏರಿದ ಸುಮಾರು 100 ಜನರ ತಂಡ, ಚಲಿಸುವ ಮೋಡಗಳ ನಡುವೆಯೇ ನಾಲ್ಕು ದಿಕ್ಕಿನಲ್ಲಿ ನಾಲ್ಕು ತಂಡಗಳಾಗಿ ತ್ಯಾಜ್ಯಗಳನ್ನು ಆರಿಸುತ್ತಾ ಸೀತಾಳಯ್ಯನಗಿರಿ ದೇವಾಲಯ ತಲುಪುವ ವೇಳೆಗೆ ಸೂರ್ಯ ನೆತ್ತಿಗೆ ಬಂದಿದ್ದ. ಹುಲ್ಲುಗಾವಲು, ಶೋಲಾ ಸೇರಿದಂತೆ 4ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಸಿಗರೇಟ್ ಪ್ಯಾಕ್, ಪ್ಲಾಸ್ಟಿಕ್ ಕವರುಗಳು, ನೀರು, ಲಿಕ್ಕರ್, ಬಿಯರ್ ಬಾಟಲ್‌ಗಳು, ಐಸ್‌ಕ್ರೀಮ್ ಕಪ್, ಡಬ್ಬಗಳು ಸೇರಿದಂತೆ ಸುತ್ತಲಿನ ಕಸಕಡ್ಡಿಗಳನ್ನು ಚೀಲಗಳಲ್ಲಿ ಸಂಗ್ರಹಿಸಲಾಯಿತು. ಸುಮಾರು 800ಕೆ.ಜಿ.ಗೂ ಹೆಚ್ಚು ಕಸವನ್ನು ಎರಡು ಗೂಡ್ಸ್ ಗಾಡಿಗಳಲ್ಲಿ ಕೆಳಗೆ ತಂದು ವಿಲೇವಾರಿ ಮಾಡಲಾಯಿತು.







