ಕಾರವಾರ: ರೈತರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತಕ್ಕೆ ಮನವಿ

ಕಾರವಾರ, ಅ.4: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು.
ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳು ರಾಜ್ಯದ ಕೃಷಿರಂಗವನ್ನು ಬಿಕ್ಕಟ್ಟಿಗೆ ತಳ್ಳಿದೆ. ಹೀಗಾಗಿ ರೈತರು ದೊಡ್ಡ ಪ್ರಮಾಣದಲ್ಲಿ ತೀರಿಸಲಾಗದಂಥ ಸಾಲದಲ್ಲಿದ್ದಾರೆ. ಅನೇಕ ಕಡೆಗಳಲ್ಲಿ ಕೃಷಿ ಭೂಮಿಗಳು ಬಂಜರಾಗಿದೆ. ವಿವಿಧ ಕೃಷಿ ಭೂಮಿಗಳಲ್ಲಿ ಹೆಚ್ಚಿನ ಇಳುವರಿ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿದೆ. ಬೆಲೆಗಳ ಏರಿಳಿತಗಳಿಂದ ರೈತರನ್ನು ರಕ್ಷಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದ್ದಾರೆ. ಬೇಡಿಕೆಗಳು: ಅತಿವೃಷ್ಟಿ ಮತ್ತು ಅನಾವೃಷ್ಟಿಗಳಿಂದ ನಷ್ಟಕ್ಕಿಡಾಗುವ ಎಲ್ಲ ರೈತರಿಗೆ ಭೂಹೀನ ಮತ್ತು ಆಯಾ ಭೂಮಿಯನ್ನು ಅವಲಂಬಿಸಿ ಬದುಕುವ ಕಾರ್ಮಿಕರಿಗೆ ಕನಿಷ್ಠ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಕೃಷಿ ಉತ್ಪಾದನಾ ವೆಚ್ಚ ಶೇ.50ರಷ್ಟು ಸಹಾಯಧನ ಒದಗಿಸುವ ನೀತಿ ಜಾರಿಗೆ ತರಬೇಕು. ಎಲ್ಲ ಬಡವರಿಗೆ ಉಚಿತ ನಿವೇಶನ ನೀಡಿ ಶೇ.75 ಸಹಾಯಧನದ ಹಾಗೂ ಶೇ.25ರಷ್ಟು ಬಡ್ಡಿರಹಿತ 6 ಲಕ್ಷ ರೂ. ಮನೆ ಸಾಲ ನೀಡುವ ಯೋಜನೆ ರೂಪಿಸಿ ಅಗತ್ಯ ಹಣ ನೀಡಬೇಕು.
ಬಡವರು ಸಾಗುವಳಿಯಲ್ಲಿ ತೊಡಗಿದ ಸರಕಾರಿ ಹಾಗೂ ಅರಣ್ಯ ಜಮೀನುಗಳ ಹಕ್ಕು ಪತ್ರ ನೀಡಲು ಅಡ್ಡಿಯಾಗಿರುವ ಎಲ್ಲ ತೊಡಕುಗಳನ್ನು ನಿವಾರಿಸಿ ಆದಷ್ಟು ಬೇಗ ಹಕ್ಕು ಪತ್ರ ನೀಡಬೇಕು ಎಂಬಿತ್ಯಾದಿ 27 ಬೇಡಿಕೆಗಳುಳ್ಳ ಮನವಿಯನ್ನು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬೆನಿತ್ ಸಿದ್ಧಿ, ಸುಭಾಷ ಗಡವಸ್ಕರ್, ಲೋರೆನ್ಸ್ ಸಿದ್ಧಿ, ಗಣಪತಿ ಜೋಶಿ, ಶರೀಫ್ ಅಮಗಾಂವ್, ರಾಜು ಹರಿಕಾಂತ, ಶ್ರೀಕಾಂತ ನಾಯ್ಕ, ತೆರೆಜಾ ಸಿದ್ಧಿ, ಸೀತಾ ಸಿದ್ಧಿ, ಫಾತಿಮಾ ಸಿದ್ಧಿ, ದಿಲೀಪ್ ಪಾಂಡುರಂಗ, ಪ್ರಕಾಶ ಸಿದ್ಧಿ ಹಾಗೂ ಮತ್ತಿತರರು ಭಾಗವಹಿಸಿದ್ದರು.







