ಸಂಗೀತ ಸಾರ್ವತ್ರಿಕ ಭಾಷೆ: ಕವಿತಾ ಶೇಖರ್
ಸಂಗೀತ ಕಾರ್ಯಕ್ರಮ

ಚಿಕ್ಕಮಗಳೂರು, ಅ.4: ಸಂಗೀತಕ್ಕೆ ಯಾವುದೇ ಭಾಷೆ, ಪ್ರಾದೇಶಿಕತೆ ಮತ್ತು ಜಾತಿ, ಧರ್ಮಗಳ ಮಿತಿಯಿಲ್ಲ. ಅದೊಂದು ಸಾರ್ವತ್ರಿಕ ಭಾಷೆಯಾಗಿದೆ ಎಂದು ಚಿಕ್ಕಮಗಳೂರು ನಗರಸಭಾಧ್ಯಕ್ಷೆ ಕವಿತಾ ಶೇಖರ್ ನುಡಿದರು.
ನಗರದ ಯುರೇಕಾ ಅಕಾಡಮಿ ಮತ್ತು ಪೂರ್ವಿ ಸಂಗೀತ ಅಕಾಡಮಿಗಳ ಸಂಯುಕ್ತಾಶ್ರಯದಲ್ಲಿ ಯುರೇಕಾ ಅಕಾಡಮಿಯಲ್ಲಿ ನಡೆದ ‘ಕಾಡುವ ಗೀತೆಗಳು’ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತಾಭ್ಯಾಸದಿಂದ ಮನಸ್ಸು ಮುದಗೊಳ್ಳುತ್ತದೆ. ಆರೋಗ್ಯ ವೃದ್ಧಿಸುತ್ತದೆ. ದಣಿವು ದೂರವಾಗುತ್ತದೆ. ಸಂಗೀತಕ್ಕೆ ರೋಗಗಳನ್ನು ಗುಣಪಡಿಸುವಂತಹ ಶಕ್ತಿಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೀಪಕ್ ದೊಡ್ಡಯ್ಯ ಮಾತನಾಡಿ, ಯಾವ ವ್ಯಕ್ತಿಗೆ ಯಾವ ವಿಷಯ ಯಾವಾಗಲೂ ಕಾಡುತ್ತದೆಯೋ ಅದೇ ವಿಷಯದಲ್ಲಿ ಅವನಿಗೆ ಹೆಚ್ಚೆಚ್ಚು ಆಸಕ್ತಿ ಬೆಳೆಯುತ್ತದೆ. ಅದೇ ಕಾಡುವ ಹಾಡುಗಳು ಒಬ್ಬ ಕಲಾವಿದನನ್ನು ಒಳ್ಳೆಯ ಹಾಡುಗಾರನನ್ನಾಗಿ ಮಾಡಲು ಸಹಾಯಕ ವಾಗುತ್ತವೆ. ಒಬ್ಬ ಹಾಡುಗಾರ ತಾನು ಹಾಡುವ ಪ್ರತಿಯೊಂದು ಹಾಡಿನಲ್ಲೂ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಒಬ್ಬ ಉತ್ತಮ ಹಾಡುಗಾರನಾಗಲು ಸಾಧ್ಯವಾಗುತ್ತದೆ ಎಂದರು.
ಹಿರಿಯ ಕಾಫಿ ಬೆಳೆಗಾರರಾದ ಗೌರಮ್ಮ ಬಸವೇ ಗೌಡ ಮಾತನಾಡಿ, ಒಬ್ಬ ವ್ಯಕ್ತಿಯೂ ರೂಢಿಸಿಕೊಳ್ಳುವ ಹವ್ಯಾಸಗಳ ಮೇಲೆ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸಂಗೀತದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರು ತಮ್ಮ ಸಂಸಾರದಲ್ಲಿ ಸದಾ ನೆಮ್ಮದಿಯಿಂದ ಇರುವುದು ಒಂದು ಒಳ್ಳೆಯ ಆಶಾವಾದ ಎಂದರು.
ಅಕಾಡಮಿಯ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಕಲಾವಿದರು ತಮ್ಮ ಅಳುಕು ಸ್ವಭಾವದಿಂದ ಹೊರ ಬರಬೇಕು. ತಾನು ಎತ್ತರಕ್ಕೆ ಬೆಳೆಯಬೇಕು ಎನ್ನುವ ಅಭಿಲಾಷೆ ಹೊಂದಿರಬೇಕು. ತಮಗೆ ಸಿಗುವ ಪ್ರತಿಯೊಂದು ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಹಾಡುವಾಗ ಆಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಆ ತಪ್ಪುಗಳು ಪುನರಾವರ್ತನೆ ಆಗದಂತೆ ನಿಗಾ ವಹಿಸಿದರೆ ಖಂಡಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ನುಡಿದರು.
ನಗರಸಭಾ ಉಪಾಧ್ಯಕ್ಷ ರವಿಂದ್ರ ಪ್ರಭು ಮಾತನಾಡಿದರು. ಎ.ಐ.ಟಿ ಕಾಲೇಜಿನ ಪ್ರಾಚಾರ್ಯ ಡಾ. ಸುಬ್ರಾಯ, ಕಲಾ ತಂಡದ ಕೆ.ಮೋಹನ್ ಮತ್ತು ಅರ್ಚನಾರಾವ್ ವೇದಿಕೆಯಲ್ಲಿದ್ದರು. ಸುಧೀರ್ ಸ್ವಾಗತಿಸಿ, ಪಂಚಮಿ ತಂಡದವರು ಪ್ರಾರ್ಥಿಸಿದರು. ವೆಂಕಟೇಶ್ ವಂದಿಸಿದರು.







